ಬಾಗಲಕೋಟೆ: ಚಿಲ್ಲರೆ ಕೇಳುವ ನೆಪದಲ್ಲಿ ಬಂದು 15,000 ರೂ. ದೋಚಿ ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿದೆ.
ಬನಹಟ್ಟಿಯ ವೈಭವ ಚಿತ್ರಮಂದಿರ ಬಳಿ ಇರುವ ರಾಜ್ ವರ್ಲ್ಡ್ ಮೊಬೈಲ್ ಸೆಂಟರ್‌ನಲ್ಲಿ ಒಂಟಿ ಯುವತಿ ಕುಳಿತಿದ್ದನ್ನು ಗಮನಿಸಿದ ಇಬ್ಬರು ಖದೀಮರು, 500 ರೂ. ಚಿಲ್ಲರೆ ನೀಡಿ ಎಂದು ಕೇಳಿದ್ದಾರೆ. ಅಂಗಡಿಯೊಳಗಿದ್ದ ಯುವತಿ ಚಿಲ್ಲರೆಯಿಲ್ಲ ಎಂದರು. ಕೊನೆಗೆ 100 ರೂ.ಗೆ ಚಿಲ್ಲರೆ ಇದರೇ ಕೊಡಿ ಎಂದು ಓರ್ವ ಮಾತಿಗಿಳಿದ್ದಾನೆ. ಮತ್ತೋರ್ವ ನೇರವಾಗಿ ಅಂಗಡಿಯೊಳಗೆ ನುಗ್ಗಿ ಡ್ರಾವರ್ನಲ್ಲಿ ಇದೆಯಾ ನೋಡಿ ಎಂದಿದ್ದಾನೆ.
ಮತ್ತೋರ್ವ ಮಾತಿನೊಂದಿಗೆ ಗೊಂದಲ ಸೃಷ್ಟಿಸಿ ಏಕಾಏಕಿ ಡ್ರಾವರ್ನಲ್ಲಿದ್ದ ಹಣದ ಬಂಡಲ್‌ನ್ನು ಕ್ಷಣಾರ್ಧದಲ್ಲಿಯೇ ಎತ್ತಿಕೊಂಡು ಇಬ್ಬರೂ ಬೈಕ್ ಏರಿ ಪರಾರಿಯಾಗಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ಯುವತಿ ಜೋರಾಗಿ ಕೂಗುವಷ್ಟರಲ್ಲಿಯೇ ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.