ಬಾಗಲಕೋಟೆ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಳೇದಗುಡ್ಡ ಬಳಿಯ ಕೋಟೆಕಲ್ಲ ಗ್ರಾಮದ ಬೆಟ್ಟದಲ್ಲಿರುವ ದಿಡಗಿನ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಪ್ರಕೃತಿಯ ಈ ರಮಣೀಯ ಸೌಂದರ್ಯವನ್ನು ಬಾಗಲಕೋಟೆ ಮಂದಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಾಲ್ನೊರೆಯಂತೆ ಬೀಳುತ್ತಿರುವ ಜಲಪಾತ ಕಣ್ಣಿಗೆ ಹಬ್ಬ. ಆದರೆ ಇಲ್ಲಿಗೆ ಹೋಗುವುದೇ ಹರಸಾಹಸದ ಕೆಲಸವಾಗಿದೆ. ರಸ್ತೆ ಸಮಸ್ಯೆ ಫಾಲ್ಸ್ಗೆ ಹೋಗಲು ಅಡ್ಡಿಯಾಗಿದೆ. ಇಲ್ಲಿಗೆ ತಲುಪಬೇಕೆಂದರೆ ಗುಳೇದಗುಡ್ಡ ಬೆಟ್ಟದ ಮೇಲೆ ಹೋಗಬೇಕು ಇಲ್ಲವೇ ಕೋಟೆಕಲ್ಲ ಗ್ರಾಮದಿಂದ ಬೆಟ್ಟದ ಮೇಲೆ ಸಾಗಬೇಕು. ವಾಹನಗಳಂತೂ ಹೋಗಲಾರವು. ಹೀಗಾಗಿ ಯುವಕರು ಕಲ್ಲುಮುಳ್ಳೆನ್ನದೇ ಹರಸಾಹಸ ಮಾಡಿ ಫಾಲ್ಸ್ ಕಡೆಗೆ ಧಾವಿಸುತ್ತಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಸುಂಕ ಇಳಿಕೆ ಕುರಿತು ಪರಿಶೀಲನೆ: ಸಿಎಂ ಬೊಮ್ಮಾಯಿ
ಕಾರು, ಬೈಕ್‌ಗಳು ತೆರಳಲು ಸುಗಮ ದಾರಿ ಮಾಡಿಕೊಟ್ಟರೆ ದಿಡಗಿನ ಫಾಲ್ಸ್ ಪ್ರವಾಸಿತಾಣವಾಗಿ ಬೆಳೆಯುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಫಾಲ್ಸ್ ಮೈದುಂಬಿ ಧುಮುಕುತ್ತದೆ. ಎರಡರಿಂದ ಮೂರು ದಿನಗಳ ಕಾಲ ಸತತ ಮಳೆಯಾದರೂ ಸಾಕು ಜಲಪಾತಕ್ಕೆ ವಿಶೇಷ ಕಳೆ ಬರುತ್ತದೆ. ಹಾಗಾಗಿ ಈ ಸ್ಥಳವನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.