ಬಾಗಲಕೋಟೆ: ಮನೆ ಕಳ್ಳತನ ಹಾಗೂ ಜನರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಕಳ್ಳನನ್ನು ಮುಧೋಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಧೋಳ ಪಟ್ಟಣದಲ್ಲಿ ನಸುಕಿನ ಜಾವ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಹಿಡಿದು ವಿಚಾರಣೆ ಮಾಡುತ್ತಿದ್ದ ವೇಳೆ, ಈತ ಕಳ್ಳತನ ಮಾಡುವುದು ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ಬೇಟಗೇರಿ ಪಟ್ಟಣದ ನಿವಾಸಿ, ಹುಸೇನ ಅಲಿ ಇರಾಣಿ ಬಂಧಿತ ವ್ಯಕ್ತಿಯಾಗಿದ್ದಾನೆ.
ಗದಗದಿಂದ ಬಸ್ ಮೂಲಕ ಆಗಮಿಸುತ್ತಿದ್ದ ಈತ ಮಹಾಲಿಂಗಪುರ ಹಾಗೂ ಮುಧೋಳ ಪಟ್ಟಣದಲ್ಲಿ ಯಾರೂ ಇಲ್ಲದ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚಿಕೊಂಡು ಹೋಗುವುದು ಹಾಗೂ ಚಿನ್ನಾಭರಣ ಅಂಗಡಿಯಲ್ಲಿ ಹೋಗಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಅಲ್ಲಿಂದಲೂ ಚಿನ್ನಾಭರಣ ದೋಚುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಬಂಧಿತನಿಂದ ಒಟ್ಟು 16,75,000 ಕಿಮ್ಮತ್ತಿನ 335 ಗ್ರಾಂ ತೂಕದ ಚಿನ್ನಾಭರಣ ಹಾಗೂ 19,800 ರೂ.ಗಳ ಕಿಮತ್ತಿನ 330 ಗ್ರಾಂ ತೂಕದ ವಿವಿಧ ಬೆಳ್ಳಿಯ ಆಭರಣಗಳನ್ನು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಸಿಪಿಐ ಎಚ್.ಆರ್.ಪಾಟೀಲ, ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಮಾನ ಘೋಷಣೆ ಮಾಡಿದ್ದಾರೆ.