ಬಾಗಲಕೋಟೆ: ಕಾರ್ಮಿಕರಿಗೆ ಕಿಟ್ ವಿತರಣೆ ಸಮಾರಂಭ ಮುಗಿಸಿದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ನಿರ್ಗಮಿಸೋ ವೇಳೆ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ನಡೆಯಿತು.
ಹೊಸೂರು ಗ್ರಾಮದಲ್ಲಿ ಆರಂಭವಾಗಿರುವ ಮದ್ಯದಂಗಡಿ ಬಂದ್ ಮಾಡುವಂತೆ ಮಹಿಳೆಯರು ಒತ್ತಾಯಿಸಿ ಸಿದ್ದರಾಮಯ್ಯನವರ ಮುತ್ತಿಗೆ ಹಾಕಿದರು. ಕಳೆದ ಹಲವು ದಿನಗಳಿಂದ ಹೊಸೂರ ಗ್ರಾಮದಲ್ಲಿ ಸಾರಾಯಿ ಅಂಗಡಿ ತೆರವುಗೊಳಿಸಬೇಕು ಎಂದು ಮಹಿಳೆಯರು, ಜಿಲ್ಲಾಡಳಿತ ಭವನದಲ್ಲಿ ಸೇರಿದಂತೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.
ಬಾದಾಮಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ ಶಾಸಕರಾದ ಸಿದ್ದರಾಮಯ್ಯನವರಿಗೆ ಸಮಾರಂಭದಲ್ಲಿ ಅಡ್ಡಲಾಗಿ ನಿಂತು ಸಾರಾಯಿ ಅಂಗಡಿ ಬಂದ್ ಮಾಡಿಸುವಂತೆ ಒತ್ತಾಯಿಸಿದರು.
ಸಾರಾಯಿ ಕುಡಿದು ಜೀವನ ಹಾಳಾಗುತ್ತಿದೆ. ಕೂಲಿ ನಾಲಿ ಮಾಡಿ ದುಡಿದು ಬಂದ ಪುರುಷರು ಕುಡಿದು ಹಾಳಾಗುತ್ತಿದ್ದಾರೆ ಎಂದು ಮಹಿಳೆಯರು ತಮ್ಮ ನೋವನ್ನ ಹೇಳಿಕೊಂಡರು. ಮಹಿಳೆಯರ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ, ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.