ಬಾಗಲಕೋಟೆ: ಮಾಜಿ ದೇವದಾಸಿಯರ ಮಕ್ಕಳ ಮದುವೆ ಸಮಾರಂಭವು ನಗರದ ಕಲಾಭವನದಲ್ಲಿ ಇಂದು ಅದ್ಧೂರಿಯಾಗಿ ಜರುಗಿತು.
ಜಿಲ್ಲಾ ಪಂಚಾಯತ್ ಹಾಗೂ ದೇವದಾಸಿಯರ ಪುನರ್ವಸತಿ ನಿರ್ಮಾಣ ಇಲಾಖೆಯಿಂದ ಆಯೋಜಿಸಿದ್ದ ಮದುವೆ ಸಮಾರಂಭ ಹಾಗೂ ಸರ್ಕಾರದ ಯೋಜನೆಯನ್ನು ಫಲಾನುಭವಿಗಳಿಗೆ ವಿತರಣೆ ಸಮಾರಂಭ ನಡೆಯಿತು. ಸರ್ಕಾರಿ ಅಧಿಕಾರಿಗಳು ತಮ್ಮ ಮನೆಯ ಮದುವೆ ಸಂಭ್ರಮದಂತೆ ಸಮಾರಂಭ ಆಯೋಜಿಸುವ ಮೂಲಕ ಗಮನ ಸೆಳೆದರು.
ಮಾಜಿ ದೇವದಾಸಿಯರ ಮಕ್ಕಳಿಗೆ ಬೇರೆ ಜಾತಿಯ ವರಗಳನ್ನು ನೋಡಿ, ಸುಮಾರು ಹತ್ತು ಜೋಡಿಯ ವಧು-ವರರ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಡಾ.ಕ್ಯಾಪ್ಟನ್ ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗಂಗೂಬಾಯಿ ಮಾನಕರ್ ಸೇರಿದಂತೆ ಇತರೆ ಅಧಿಕಾರಿಗಳು ಸೇರಿಕೊಂಡು, ತಾಳಿ, ಕಾಲುಂಗುರ ಸೇರಿದಂತೆ ಇತರ ವಸ್ತುಗಳನ್ನು ನೀಡಿ ಮದುವೆ ನೇರೆವೇರಿಸಿದರು.
ಕಾರ್ಯಕ್ರಮಕ್ಕೆ ನಿವೃತ್ತಿ ಐಎಎಸ್ ಅಧಿಕಾರಿ ರತ್ನಪ್ರಭಾ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವದಾಸಿ ಮಕ್ಕಳನ್ನು ಮುಖ್ಯ ವಾಹಿನಿಗೆ ಕರೆ ತರುವ ಕಾರ್ಯ ನಡೆಸಿ, ಉನ್ನತ ಮಟ್ಟದ ಶಿಕ್ಷಣ ನೀಡುವುದು ಅಗತ್ಯವಿದೆ. ಇಂತಹ ಕಾರ್ಯ ಜಿಲ್ಲಾ ಪಂಚಾಯತ್ ಸಿಇಓ ಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಬಳಿಕ ಸಿಇಓ ಗಂಗೂಬಾಯಿ ಮಾನಕರ್ ಮಾತನಾಡಿ, ಮಾಜಿ ದೇವದಾಸಿ ಮಹಿಳೆಯರ ಮಕ್ಕಳನ್ನು ಮದುವೆಯಾದಲ್ಲಿ ಸರ್ಕಾರದಿಂದ ಐದು ಲಕ್ಷ ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು. ಈ ಸಮಾರಂಭದಲ್ಲಿ ಮದುವೆಯಾಗಿರುವುದಕ್ಕೆ ನವವಧುಗಳು ಸಹ ಈಟಿವಿ ಭಾರತ್ನೊಂದಿಗೆ ಸಂತಸ ಹಂಚಿಕೊಂಡರು.