ಬಾಗಲಕೋಟೆ: ಇಲ್ಲಿನ ನವನಗರದಲ್ಲಿರುವ ತಾಳಿಕೋಟಿ ಅವರ ರೊಟ್ಟಿ ಅಂಗಡಿ ಅಂದರೆ ಸಾಕು ಉತ್ತರ ಕರ್ನಾಟಕದ ಆಹಾರ, ತಿಂಡಿ ಪದಾರ್ಥಗಳಿಗೆ ಪ್ರಸಿದ್ಧಿ ಹೊಂದಿದೆ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಮೆಕ್ಕಜೋಳ ರೊಟ್ಟಿ ಹಾಗೂ ರಾಗಿ ರೊಟ್ಟಿ ಸೇರಿದಂತೆ ಕಡಕ್ ಹಾಗೂ ಮೆತ್ತನೆ ರೊಟ್ಟಿ ಮಾಡಿ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಗ್ರಾಮೀಣ ಪ್ರದೇಶದ ಮಹಿಳೆಯರ ಕೈಯಿಂದ ರೊಟ್ಟಿ ತಯಾರಿಸಿ, ಗುಣಮಟ್ಟದ ರೊಟ್ಟಿ ಮಾರಾಟ ಮಾಡುತ್ತಾರೆ. ಕಳೆದ 20 ವರ್ಷಗಳಿಂದ ಈ ವ್ಯಾಪಾರ ಮಾಡುತ್ತಾ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ.
ರೊಟ್ಟಿ ತಯಾರಿಕೆ ಅಷ್ಟೇ ಅಲ್ಲ, ಮನೆಯಲ್ಲಿ ಸಿಹಿ ತಿಂಡಿಗಳಾದ ಬೆಲ್ಲದ ಜುಲೇಬಿ, ಕಡುಬು, ಹೋಳಿಗೆ, ಕರದಂಟು ಸೇರಿದಂತೆ ಇತರ ಸಿಹಿ ತಿಂಡಿ ಪದಾರ್ಥಗಳು, ಶೇಂಗಾ ಚಟ್ನಿ, ಪುಟಾಣಿ ಚಟ್ನಿ, ಕೆಂಪು ಮೆನಸಿಕಾಯಿ ಚಟ್ನಿ, ಉಪ್ಪಿನಕಾಯಿ ಹೀಗೆ ಎಲ್ಲ ಬಗೆಯ ರುಚಿಯಾದ ಗುಣಮಟ್ಟದ ಆಹಾರವನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಇವರು ಮಾಡಿರುವ ಆಹಾರ ಪದಾರ್ಥಗಳು ಮುಂಬೈ, ಗೋವಾ, ಹೈದರಾಬಾದ್ ಸೇರಿದಂತೆ ಇತರ ಕಡೆ ಮಾರಾಟವಾಗುತ್ತವೆ.
ಓದಿ:ಹೊಸ ವರ್ಷಕ್ಕೆ ಶಾಲಾ-ಕಾಲೇಜು ಆರಂಭ?: ಸಿಎಂ ನೇತೃತ್ವದಲ್ಲಿ ನಾಳೆ ಅಧಿಕಾರಿಗಳ ಸಭೆ!!
ಒಂದು ರೊಟ್ಟಿಯನ್ನು 3 ರೂಪಾಯಿಯಿಂದ 5 ರೂಪಾಯಿಗಳವರೆಗೆ ಮಾರಾಟ ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಮಹಿಳೆಯರಿಗೆ ರೊಟ್ಟಿ ಬಡಿಯುವ ಕೆಲಸ ನೀಡಿ, ಇವರು ವ್ಯಾಪಾರ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಮಿಠಾಯಿ ಅಂಗಡಿ ಇಟ್ಟುಕೊಂಡು ಬಂದಿರುವ ಇವರು, ಈಗ ರೊಟ್ಟಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗುವಂತಾಗಿದೆ.