ಬಾಗಲಕೋಟೆ: ಲೋಕಾಯುಕ್ತ ದಾಳಿ ಸಮಯದಲ್ಲಿ ಎರಡು ನಕ್ಷತ್ರ ಆಮೆ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾಗಿವೆ. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆಗಿರುವ ಚೇತನಾ ಪಾಟೀಲ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿತ್ತು.
''ಸಿಕ್ಕ ಆಮೆಗಳು ವಿಲಕ್ಷಣ ಜಾತಿಗೆ (Exotic Species) ಸೇರಿದ್ದಾಗಿದ್ದರಿಂದ ಅರಣ್ಯ ಅಧಿಕಾರಿಗಳನ್ನು ಸಹ ಕರೆಸಿಕೊಂಡಿದ್ದೇವೆ. ಈ ಆಮೆಗಳನ್ನು ಮನೆಯಲ್ಲಿ ಸಾಕಬಹುದೋ ಅಥವಾ ಇಲ್ಲವೋ ಅನ್ನೋದರ ಬಗ್ಗೆ ಅವರಿಂದ ಒಂದು ವರದಿ ತರಿಸಿಕೊಳ್ಳುತ್ತೇವೆ. ಅವರು ನೀಡಿದ ವರದಿ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಕಾನೂನು ಬಾಹಿರವಾಗಿದ್ದರೆ ದೂರು ದಾಖಲಾಗುತ್ತದೆ. ಸದ್ಯಕ್ಕೆ ಏನೂ ಹೇಳಲಾಗದು'' ಎಂದು ಲೋಕಾಯುಕ್ತ ಅಧಿಕಾರಿ ಪುಷ್ಪಲತಾ ಮಾಹಿತಿ ನೀಡಿದ್ದಾರೆ.
ಬೀಳಗಿ ಪಟ್ಟಣದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಶಿರೂರು ಅವರ ವಿದ್ಯಾಗಿರಿಯಲ್ಲಿರುವ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ಎರಡು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಈ ವೇಳೆ, ಪ್ರಮುಖ ದಾಖಲೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದ ತಂಡಗಳಿಂದ ದಾಳಿ ನಡೆಸಲಾಗಿದೆ.
ಅಧಿಕಾರಿಗಳ ಮನೆಗಳ ಜೊತೆಗೆ ಕಚೇರಿಗಳ ಮೇಲೂ ದಾಳಿ ಮಾಡಿ, ಸಿಬ್ಬಂದಿಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ, ಬೀಳಗಿ ಕಚೇರಿಗಳ ಮೇಲೂ ದಾಳಿ ಮಾಡಲಾಗಿದೆ. ವಿದ್ಯಾಗಿರಿಯ 18ನೆ ಕ್ರಾಸ್ ನಲ್ಲಿರುವ ಕೃಷ್ಣ ಶಿರೂರು ಮನೆ ಹಾಗೂ ವಿದ್ಯಾಗಿರಿಯ ಅಕ್ಕಿಮರಡಿ ಲೇ ಔಟ್ನಲ್ಲಿರುವ ಚೇತನಾ ಪಾಟೀಲ ಮನೆ ಮೇಲೆ ದಾಳಿ ಈ ನಡೆದಿದೆ.
ರಾಯಚೂರಲ್ಲೂ ಲೋಕಾಯುಕ್ತ ದಾಳಿ : ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎನ್. ಪ್ರಕಾಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿನ ಆರ್. ಆರ್. ಕಾಲೋನಿಯಲ್ಲಿನ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಮಾನ್ವಿ ,ರಾಯಚೂರಿನಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಆಗಿ ಪ್ರಕಾಶ್ ಕಾರ್ಯನಿರ್ವಹಿಸಿದ್ದರು. ಅಕ್ರಮ ಆಸ್ತಿಗಳಿಕೆ ಆರೋಪದಡಿ ಲೋಕಾಯುಕ್ತ ದಾಳಿ ನಡೆದಿದೆ ಎಂದು ಮೂಲಗಳು ಖಚಿತ ಪಡಿಸಿವೆ. ಇದರೊಂದಿಗೆ ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕರ ಕಚೇರಿ, ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಸಂಜೆ ಅಧಿಕೃತವಾಗಿ ಲೋಕಾಯುಕ್ತರು ದಾಳಿ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: Lokayukta Raid...ಕೊಡಗು ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ: ಅಧಿಕಾರಿ ಮನೆಯಲ್ಲಿ ನಗದು ಪತ್ತೆ