ಬಾಗಲಕೋಟೆ: ರಾಜಾಹುಲಿನ ಬೋನಿನಿಂದ ಹೊರಗೆ ಬಿಡವಲ್ದು ಅಂತಾ ಸಿಎಂ ಯಡಿಯೂರಪ್ಪ ಸ್ಥಿತಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಮರುಕ ವ್ಯಕ್ತಪಡಿಸಿ ಲೇವಡಿ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯ ಕಟ್ಟಡಕ್ಕೆ ಅಡಿಗಲ್ಲು ನೇರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುತ್ತೆ ಅಂತಿದ್ರು. ಆದ್ರೆ ಯಡಿಯೂರಪ್ಪ ಯಾಕೆ ಇಷ್ಟು ಮರ್ಜಿಯಿಂದ ಕಾಯ್ತಿದ್ದಾರೆ ಗೊತ್ತಾಗ್ತಿಲ್ಲ ಎಂದು ಹೇಳಿದರು.
ಬಿಎಸ್ವೈ ಬಗ್ಗೆ ನನಗೆ ಗೌರವ ಇದೆ. ನಿಜಲಿಂಗಪ್ಪ ನಂತರ ನಾಲ್ಕನೇ ಬಾರಿ ಸಿಎಂ ಆಗಿದ್ದಾರೆ. ಆದ್ರೆ ಹೈಕಮಾಂಡ್ ಅವರಿಗೆ ಕೆಲಸ ಮಾಡಲು ಬಿಡ್ತಾ ಇಲ್ವಲ್ಲಾ ಎಂದು ನನಗೆ ಮರುಕ ಇದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿ, ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಧ್ಯಕ್ಷರ ಆಯ್ಕೆ ಚೆಂಡು ಸದ್ಯ ಹೈಕಮಾಂಡ್ ಅಂಗಳದಲ್ಲಿದೆ . ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ನಮ್ಮಲ್ಲಿ ಸಿದ್ದರಾಮಯ್ಯ ಬಣ, ಇನ್ನೊಬ್ಬರ ಬಣ ಎಂಬುದಿಲ್ಲ ಕಾಂಗ್ರೆಸ್ ಒಂದೇ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರದ ಮಂತ್ರಿಮಂಡಲ ವಿಸ್ತರಣೆ ಕುರಿತು ತಿಂಗಳಾನುಗಟ್ಟಲೆ ಮಂತ್ರಿಮಂಡಲ ವಿಸ್ತರಣೆ ಮಾಡಲು ಆಗದ ಸರ್ಕಾರದ ಬಗ್ಗೆ ಜನ ಛೀ, ಥೂ ಎಂದು ಉಗುಳ್ತಿದ್ದಾರೆ. ಮಂತ್ರಿ ಮಂಡಲ ವಿಸ್ತರಣೆ ವಿಚಾರದ ಬಗ್ಗೆ ಹೈಕಮಾಂಡ್ ಸಿಎಂಗೆ ಸಲಹೆ ಕೊಡಬೇಕು. ಆದ್ರೆ ಮಂತ್ರಿ ಮಂಡಲಕ್ಕಾಗಿ ಹಗ್ಗ ಜಗ್ಗಾಟ ನಡೆದಿದ್ದು, ನನ್ನ 45 ವರ್ಷದ ಸಾರ್ವಜನಿಕ ಬದುಕಿನಲ್ಲಿ ನೋಡಿದ್ದು ಇದೇ ಮೊದಲು. ಬಿಜೆಪಿ ಹೈಕಮಾಂಡ್ಗೆ ದೇವರು ಸದ್ಬುದ್ದಿ ಕೊಡಲಿ. ಬೇಗ ಮಂತ್ರಿ ಮಂಡಲ ವಿಸ್ತರಣೆ ಮಾಡಲಿ. ಬಹಳಷ್ಟು ಜನ ನಾ ಮಂತ್ರಿ ಆಗ್ತೀನಿ, ನಾ ಮಂತ್ರಿ ಆಗ್ತೀನಿ ಎಂದು ಜಪ ಮಾಡ್ಕೋತ ಕುಳಿತಿದ್ದಾರೆಂದು ಲೇವಡಿ ಮಾಡಿದರು.