ಬಾಗಲಕೋಟೆ: ಉತ್ತರ ಕರ್ನಾಟಕ ಧಾರ್ಮಿಕ ಕೇಂದ್ರ, ಶಕ್ತಿ ಪೀಠದಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಿಗೆ ಕೋಟಿ ಜಪ ಮಾಡುವ ಮೂಲಕ ಕೊರೊನಾ ಹೋಗಲಾಡಿಸುವುದಕ್ಕೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಕೊರೊನಾ ವೈರಸ್ ಭೀತಿಯಿಂದ ಭಕ್ತರ ಪ್ರವೇಶ ನಿಷೇಧ ಆಗಿದ್ದರಿಂದ ಪ್ರಮುಖ ಅರ್ಚಕರ ಆರು ಕುಟುಂಬದವರು ತಮ್ಮ ಮನೆಯಲ್ಲಿ ಸಾಮಾಜಿಕ ಅಂತರದಲ್ಲಿ ಕುಳಿತುಕೊಂಡು ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಕೋಟಿ ಜಪ ಮಾಡುತ್ತಿದ್ದಾರೆ. ಪ್ರತಿನಿತ್ಯ ಗರ್ಭ ಗುಡಿಯಲ್ಲಿ ಪೂಜೆ, ಪುನಸ್ಕಾರ ಮಾಡುತ್ತಾರೆ. ನಂತರ ಮನೆಯಲ್ಲಿ ಕುಟುಂಬ ಸಮೇತ ಓಂ ಶಾಂಖಾಬರಿ ನಮಃ ಎಂದು ಜಪ ಮಾಡುತ್ತಾ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಏಪ್ರಿಲ್ 18ರಂದೇ ಜಪ ಪ್ರಾರಂಭ ಮಾಡಿದ್ದು, ಈಗಾಗಲೇ 25 ಲಕ್ಷಕ್ಕೂ ಹೆಚ್ಚು ಬಾರಿ ಜಪ ಆಗಿದೆ.
ಇನ್ನೂ ಒಂದು ವಾರದೊಳಗೆ ಕೋಟಿ ಜಪ ಮಾಡಿ, ನಂತರ ದೇವಿಗೆ ವಿಶೇಷ ಪೂಜೆ ಪುರಸ್ಕಾರ ಮಾಡುವ ಮೂಲಕ ನಮ್ಮ ದೇಶಕ್ಕೆ ಅಂಟಿರುವ ಕೊರೊನಾ ರೋಗ ಹತೋಟಿಗೆ ಬಂದು ಸಂಪೂರ್ಣ ವೈರಸ್ ನಾಶ ಹೊಂದುವಂತೆ ಆಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ದೇವಾಲಯದಲ್ಲಿ ಪೂಜೆ, ಪುನಸ್ಕಾರ ಕೈಗೊಂಡಲ್ಲಿ ಬೇಡಿದ ವರವನ್ನು ದೇವಿ ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಹೀಗಾಗಿ ಅರ್ಚಕರ ಕುಂಟುಬದವರೇ ಸೇರಿಕೊಂಡು ಕೋಟಿ ಜಪ ಪೂಜೆ ಮಾಡುವ ಮೂಲಕ ಕೊರೊನಾ ಹೋಗಲಾಡಿಸಲು ದೇವಿಯಲ್ಲಿ ಬೇಡಿಕೊಳ್ಳುತ್ತಿರುವುದಾಗಿ ಅರ್ಚಕರಾದ ಮಹೇಶ ಎಂಬುವವರು ತಿಳಿಸಿದ್ದಾರೆ.