ಬಾಗಲಕೋಟೆ: ಜಿಲ್ಲೆಯಲ್ಲಿ ಈ ಬಾರಿ ಹೋಳಿ ಆಚರಣೆಯನ್ನುಅದ್ಧೂರಿಯಾಗಿ ಆಚರಣೆ ಮಾಡದೇ, ಸರಳ ಹಾಗೂ ಶಾಂತಿಯುತವಾಗಿ ಆಚರಿಸಲು ಶಾಂತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ, ಹೋಳಿ ಸಮಿತಿ ಮುಖಂಡರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಕೋವಿಡ್ ಎರಡನೇಯ ಹಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುವ ಎತ್ತಿನ ಬಂಡಿಗಳ ಬಣ್ಣದ ಎರಚಾಟ ಹಾಗೂ ರೇನ್ ಡ್ಯಾನ್ಸ್ ಮಾಡಲು ಜಿಲ್ಲಾಡಳಿತ ನಿಷೇಧ ಮಾಡಿದೆ.
ಆದರೆ, ಮನೆಯಲ್ಲಿ, ಆಯಾ ಪ್ರದೇಶದಲ್ಲಿ ಕೆಲವರು ಮಾತ್ರ ಸೇರಿಕೊಂಡು ಬಣ್ಣದ ಆಟ ಆಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮಹಾರಾಷ್ಟ್ರ ರಾಜ್ಯದಿಂದ ಕೊರೊನಾ ರೋಗ ವ್ಯಾಪಿಸುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರಲು ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರು ಮನವಿ ಮಾಡಿಕೊಂಡರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ಮಾತನಾಡಿ, ಈ ಸಲ ಹೋಳಿಯಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್ಗಳ ಮೂಲಕ ಬಣ್ಣ ಎರಚುವ ಆಚರಣೆಗೆ ನಿಷೇಧ ಹೇರಲಾಗಿದೆ. ಕೇವಲ ಕೆಲ ಜನರು ಸೇರಿಕೊಂಡು ಸರಳವಾಗಿ ಆಚರಣೆ ಮಾಡುವಂತೆ ಮನವಿ ಮಾಡಲಾಗಿದೆ. ಮೂರು ದಿನಗಳ ಕಾಲ ಮದ್ಯ ಮಾರಾಟ ಮಾತ್ರ ನಿಷೇಧ ಮಾಡಲಾಗಿದ್ದು, ಉಳಿದೆಲ್ಲಾ ವಸ್ತುಗಳು ಲಭ್ಯವಿರಲಿದೆ ಎಂದು ತಿಳಿಸಿದರು. ಸಮಿತಿಯ ಮುಖಂಡರು ಸಹ ಜಿಲ್ಲಾಡಳಿತ ಸೂಚನೆ ಮೇರೆಗೆ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಗೋವಿಂದಪುರ ಡ್ರಗ್ಸ್ ಕೇಸ್: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ಗೌಡ ಬಂಧನ