ಬಾಗಲಕೋಟೆ: ಎಲ್ಲಾ ಮಠಗಳಲ್ಲಿ ಭಕ್ತರೇ ಕಾಣಿಕೆ ನೀಡುವುದು ಸಾಮಾನ್ಯ, ಆದರೆ ಜಿಲ್ಲೆಯ ಇಲಕಲ್ಲ ತಾಲೂಕಿನ ಸಿದ್ದನಕೊಳ್ಳದ ಮಠದಲ್ಲಿ ಮಾತ್ರ ಭಕ್ತರು ನೀಡಿದ ಕಾಣಿಕೆಯನ್ನು ಮರಳಿ ಭಕ್ತರಿಗೆ ನೀಡುವ ರಾಜ್ಯದ ಏಕೈಕ ಮಠ ಎಂದು ಹೆಸರು ಪಡೆದಿದೆ.
ಈ ಸಿದ್ದನಕೊಳ್ಳದ ಮಠವು, ರಾಷ್ಟ್ರಕೂಟರ ಹಾಗೂ ಚಾಲುಕ್ಯರ ಕಾಲದಲ್ಲಿಯೂ ಇತಿಹಾಸ ಹಿನ್ನೆಲೆ ಪಡೆದುಕೊಂಡಿದೆ. ಕಳೆದ 60 ವರ್ಷಗಳಿಂದ ಇಲ್ಲಿ ಹಗಲು- ರಾತ್ರಿ ನಿರಂತರ ದಾಸೋಹ ನಡೆಯುತ್ತಿದೆ. ಹಿಂದೆ ಇದ್ದ ಸಿದ್ದೇಶ್ವರ ಸ್ವಾಮೀಜಿಗಳು ಪವಾಡ ಪುರುಷರಾಗಿದ್ದರು ಎಂದು ಇಲ್ಲಿನ ಭಕ್ತರು ನಂಬಿದ್ದಾರೆ.
ಅವರ ವಾಣಿಯಂತೆ ಭಕ್ತರು ನೀಡುವ ಕಾಣಿಕೆ ಮರಳಿ ಭಕ್ತರಿಗೆ ನೀಡುವ ಕಾಯಕವನ್ನು ಮುಂದುವರೆಸಿಕೊಂಡು ಬರಲಾಗಿದೆ. ಈಗಿನ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಯಾರೇ ಭಕ್ತರು ಬಂದು ಹಣ, ಬೆಳ್ಳಿ ಕಾಣಿಕೆ ನೀಡಿದರೆ, ಅವು ಮರಳಿ ಇನ್ನೊಬ್ಬ ಭಕ್ತರಿಗೆ ಅಂದರೆ ಯಾರಾದರೂ ಮಠಕ್ಕೆ ಸಹಾಯ ಹಾಗೂ ಸಾಧನೆ ಮಾಡಿದ ಭಕ್ತರಿಗೆ ಆಶೀರ್ವಾದ ರೂಪದಲ್ಲಿ ನೀಡುತ್ತಾರೆ.
ಡಾ.ರಾಜ್ ಅಭಿನಯದ ಸಂಪತ್ತಿಗೆ ಸವಾಲ್ ಚಿತ್ರೀಕರಣ ಸೇರಿದಂತೆ ಇತ್ತೀಚೆಗೆ ಕೆಲ ಸಣ್ಣ ಪುಟ್ಟ ಸಿನಿಮಾಗಳ ಚಿತ್ರೀಕರಣ ಇಲ್ಲಿ ಮಾಡಲಾಗಿದೆ. ಹೀಗಾಗಿ ಕಲಾವಿದರ ಪೋಷಕ ಮಠವಾಗಿದ್ದು, ಪ್ರತೀ ವರ್ಷ ಸಿದ್ದಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಚಿತ್ರರಂಗದ ಕಲಾವಿದರಿಗೆ ಪ್ರೋತ್ಸಾಹಿಸಲಾಗುತ್ತದೆ.