ಬಾಗಲಕೋಟೆ: ಜಿಲ್ಲೆಯ ಸಿದ್ದನಕೊಳ್ಳದ ಮಠದಿಂದ ಪ್ರತಿ ವರ್ಷ ಕೂಡಮಾಡುವ ಶ್ರೀ ಸಿದ್ದಶ್ರೀ ಪ್ರಶಸ್ತಿಯನ್ನು ಈ ಬಾರಿ ಭಾರತೀಯ ಚಲನಚಿತ್ರ ರಂಗದ ಖ್ಯಾತ ನಿರ್ಮಾಪಕರಾದ ಆರ್.ವಿ. ಗುರುಪಾದಮ್ ಅವರಿಗೆ ನೀಡಲಾಗುವುದು ಎಂದು ಸುಕ್ಷೇತ್ರ ಸಿದ್ದನಕೊಳ್ಳ ಮಠದ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.
ಸುಕ್ಷೇತ್ರ ಸಿದ್ದನಕೊಳ್ಳ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, 7ನೇ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಭಾರತೀಯ ಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ, ನಟಿ ದಿವಂಗತ ಶ್ರೀದೇವಿ ಅವರನ್ನು ಚಿತ್ರರಂಗಕ್ಕೆ ಪ್ರಥಮವಾಗಿ ಪರಿಚಯಿಸಿ, ಮುಂದೆ ಅನೇಕ ಹಿರಿಯ ಕಲಾವಿದರನ್ನು ಬೆಳೆಸಿದ ಆರ್.ವಿ. ಗುರುಪಾದಮ್ ಅವರಿಗೆ ನೀಡಲಾಗುವುದು. ಅವರು ಮೂಲತಃ ಹುಬ್ಬಳ್ಳಿಯವರಾಗಿದ್ದು, ಈಗ ಚೆನ್ನೈನಲ್ಲಿ ನೆಲೆಸಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ: ದಿನೇಶ್ ಗುಂಡೂರಾವ್ಗೆ ಮಾತೃವಿಯೋಗ: ವರಲಕ್ಷ್ಮಿ ಗುಂಡೂರಾವ್ ಇನ್ನಿಲ್ಲ
ಪ್ರತಿ ವರ್ಷ ಜನವರಿ 14 ರಂದು ಶ್ರೀ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ, ಚಲನಚಿತ್ರೋತ್ಸವ ಸಮಾರಂಭ ಜರುಗಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದ ಜಾತ್ರೆ ಹಾಗೂ ಚಲನಚಿತ್ರೋತ್ಸವ ಸಮಾರಂಭ ನಿಷೇಧ ಮಾಡಲಾಗಿದೆ. ಕೇವಲ ಶ್ರೀ ಸಿದ್ದಶ್ರೀ ಪ್ರಶಸ್ತಿ ಸಮಾರಂಭ ಹಮ್ಮಿಕೊಂಡಿದ್ದು, ಸರ್ಕಾರದ ನಿಯಮಗಳ ಪ್ರಕಾರ ಸಮಾರಂಭ ನಡೆಸಲಾಗುವುದು ಎಂದು ಡಾ. ಶಿವಕುಮಾರ ಮಹಾಸ್ವಾಮಿಗಳು ತಿಳಿಸಿದರು.