ಬಾಗಲಕೋಟೆ: ವಿಧಾನಸಭಾ ಚುನಾವಣೆಗೆ ಕ್ಷೇತ್ರ ಆಯ್ಕೆಯ ಚಿಂತನೆಯಲ್ಲಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಕೋಲಾರ ಕ್ಷೇತ್ರವನ್ನು ಅಂತಿಮಗೊಳಿಸಿ ಘೋಷಿಸಿದ್ದಾರೆ. ಆದರೆ ಕೋಲಾರ ಕ್ಷೇತ್ರ ಮಾಜಿ ಸಿಎಂಗೆ ಹೇಳುವಷ್ಟು ಸೇಫ್ ಜಾಗವಲ್ಲ, ಅವರಿಗೆ ತನ್ನದೇ ಸಮುದಾಯದ ಹಳೇ ಶಿಷ್ಯರು ಒಳಏಟು ನೀಡುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರವಾಗಿ ಸಿದ್ದರಾಮಯ್ಯ ಆಪ್ತರು ಹೇಳಿದ್ದೇನು ನೋಡೋಣ.
ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ: ಸಿದ್ದರಾಮಯ್ಯ ಕೋಲಾರ ಮತಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವುದು ಬಾದಾಮಿ ಕ್ಷೇತ್ರದ ಪಕ್ಷದ ಕಾರ್ಯಕರ್ತರು, ಆಪ್ತರು ಹಾಗೂ ಅಭಿಮಾನಿಗಳಿಗೆ ಬೇಸರ ತರಿಸಿದೆ. ಬಾದಾಮಿಯಿಂದ ದೂರ ಉಳಿಯುತ್ತಾರೆ ಎಂಬ ಚರ್ಚೆ ಇತ್ತೀಚೆಗೆ ನಡೆಯುತ್ತಿದ್ದರೂ ಸಹ ಸಿದ್ದರಾಮಯ್ಯನವರು ಈವರೆಗೆ ಆ ಬಗ್ಗೆ ಏನನ್ನೂ ಬಹಿರಂಗಪಡಿಸಿರಲಿಲ್ಲ. ಆದರೆ ಇತ್ತೀಚೆಗೆ ಕೋಲಾರದಿಂದಲೇ ಸ್ಪರ್ಧೆ ಹೇಳಿಕೆ ನೀಡಿದ ನಂತರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ, ಪುನಃ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ.
ಸಿದ್ದರಾಮಯ್ಯ ಮನೆ ಎದುರು ಧರಣಿ: ಬಾದಾಮಿ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಿಗಾಗಿ (ಸುಮಾರು 3 ಸಾವಿರ ಕೋಟಿ ರೂ) ಸಾಕಷ್ಟು ಅನುದಾನ ತಂದಿದ್ದರು. ರಸ್ತೆ, ಕುಡಿಯುವ ನೀರು, ನೀರಾವರಿ ಹಾಗೂ ಏತ ನೀರಾವರಿ ಯೋಜನೆ ಸೇರಿದಂತೆ ಐತಿಹಾಸಿಕ ಸ್ಥಳದ ಅಭಿವೃದ್ಧಿಗಾಗಿ ಕೆಲ ಯೋಜನೆಗಳನ್ನು ಸರ್ಕಾರಕ್ಕೆ ಒತ್ತಡ ತಂದು, ಮುಖ್ಯಮಂತ್ರಿ ಹಾಗೂ ಆಯಾ ಇಲಾಖೆಯ ಸಚಿವರ ಮೇಲೆ ಒತ್ತಡ ಹೇರಿ ಸಿದ್ದರಾಮಯ್ಯ ಕೆಲಸ ಮಾಡಿಸಿದ್ದರು. ಹೀಗಾಗಿ ಈ ಬಾರಿಯೂ ಬಾದಾಮಿ ಮತ ಕ್ಷೇತ್ರದಿಂದಲೇ ಸ್ಪರ್ಧಿಸಿ ಜಯ ಗಳಿಸಿದರೆ ಮುಂದೆ ಮುಖ್ಯಮಂತ್ರಿ ಆಗುತ್ತಾರೆ. ಆಗ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗುತ್ತದೆ ಎಂದು ಅಭಿಮಾನಿಗಳು ಹಾಗೂ ಆಪ್ತರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿದ್ದರಾಮಯ್ಯನವರ ನಿರ್ಧಾರ ಅವರಲ್ಲಿ ನಿರಾಸೆ ಮೂಡಿಸಿದೆ. ಈ ನಿರ್ಧಾರದಿಂದ ಬೇಸರಗೊಂಡಿರುವ ಅಭಿಮಾನಿ ಬಳಗ, ಸಿದ್ದರಾಮಯ್ಯನವರ ಮನೆ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ.
ಹೈಕಮಾಂಡ್ ನಿರ್ಧಾರವೇನು?: ಇತ್ತೀಚೆಗೆ ಬಾದಾಮಿ ಬನಶಂಕರಿ ದೇವಾಲಯ ಜಾತ್ರೆಯ ಅಂಗವಾಗಿ ಬಾದಾಮಿ ಮತಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದ ಸಮಯದಲ್ಲಿ ಸಿದ್ದರಾಮಯ್ಯನವರ ಭಾಷಣದ ವೇಳೆ ಅಭಿಮಾನಿಗಳು ಇಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದರು. ಆಗ ಎಲ್ಲಿ ಸ್ಪರ್ಧೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಬಾದಾಮಿ, ಕೋಲಾರ ಹಾಗೂ ವರುಣಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುವಂತೆ ಕರೆಯುತ್ತಿದ್ದಾರೆ ಎಂದು ತಿಳಿಸಿದ್ದರು. ಹೈಕಮಾಂಡ್ ಎಲ್ಲಿ ಹೇಳುತ್ತಾರೋ ಅಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು.
ಆದರೆ, ಕೋಲಾರದಲ್ಲಿ ಹೋದಾಗ ಇಲ್ಲಿಯೇ ಸ್ಪರ್ಧೆ ಮಾಡುವುದಾಗಿ ಹೇಳಿದ ಬಳಿಕ ಬಾದಾಮಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿದೆ. ಬಾದಾಮಿ ದೂರ ಆಗುತ್ತದೆ ಎಂದು ಹೇಳಿದಾಗ ಹೆಲಿಕಾಪ್ಟರ್ ಕೊಡಿಸುವುದಾಗಿ ಅಭಿಮಾನಿಗಳು ತಿಳಿಸಿದ್ದರು. ಪ್ರಚಾರ ಕಾರ್ಯ ಹಾಗೂ ಇತರೆ ಕೆಲಸ ಕಾರ್ಯಗಳನ್ನು ತಮ್ಮ ಅನುಪಸ್ಥಿತಿಯಲ್ಲಿ ಮಾಡುವುದಾಗಿ ಭರವಸೆ ನೀಡಿದ್ದರು. ಇಷ್ಟೆಲ್ಲಾ ಇದ್ದರೂ ಸಹ ಸಿದ್ದರಾಮಯ್ಯನವರು ದೂರ ಹೋಗಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ ಸಿದ್ದರಾಮಯ್ಯ!
ಪ್ರಸ್ತುತ ಸಿದ್ದರಾಮಯ್ಯನವರ ಸ್ಥಾನ ಯಾರಿಗೆ ಎಂಬುದು ಮತ್ತೆ ಚರ್ಚೆ ಆಗುತ್ತಿದ್ದು, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅಥವಾ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ, ಮಹೇಶ ಹೊಸ ಗೌಡರ, ಅನಿಲ ದಡ್ಡಿ ಸೇರಿದಂತೆ ಇತರರು ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಇದು ಸಿದ್ದರಾಮಯ್ಯ ಆಪ್ತರ ಬಳಗ ಹೊಳಬಸು ಶೆಟ್ಟರ, ಎಂ.ಬಿ.ಹಂಗರಗಿ, ರಾಜ ಮಹಮ್ಮದ ಬಾಗವಾನ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹನಮಂತಗೌಡ ಯಂಕಣ್ಣನವರ ಸೇರಿದಂತೆ ಇತರ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದನ್ನೂ ಓದಿ: ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಕಬ್ಬಿಣದ ಕಡಲೆಯಾಗುತ್ತಾ..? ಸುಲಭವಾಗಿ ಒಲಿಯುತ್ತಾ?
ಹೀಗಿದ್ದರೂ ಸಹ ರಾಜಕೀಯ ನೆಲೆ ನೀಡಿದ ಬಾದಾಮಿ ಮತಕ್ಷೇತ್ರ ಬಿಟ್ಟು ಹೋಗದಂತೆ ಅಭಿಮಾನಿಗಳು ಆಪ್ತರು ಕೊನೆಯ ಕಸರತ್ತು ಮಾಡುತ್ತಿದ್ದಾರೆ. ಹೋರಾಟ ಮಾಡಿ, ಇಲ್ಲವೇ ಮನ ಪರಿವರ್ತನೆ ಮಾಡುವ ಜೊತೆಗೆ ಕೊನೆಯ ಗಳಿಗೆಯಲ್ಲಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆಯೂ ಒತ್ತಡ ತರಲು ಮುಂದಾಗಿದ್ದಾರೆ.