ಬಾಗಲಕೋಟೆ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು ಇಂದು ಬಾದಾಮಿ ಮತಕ್ಷೇತ್ರದಲ್ಲಿ ಮುಖಾಮುಖಿಯಾದರು. ಸಿದ್ದರಾಮಯ್ಯ ತವರು ಕ್ಷೇತ್ರ ಬದಾಮಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ನಾಯಕರುಗಳ ಸಮಾಗಮಕ್ಕೆ ಸಾಕ್ಷಿಯಾದರು.
ಬಾದಾಮಿ ವಿಧಾನಸಭೆ ಕ್ಷೇತ್ರದ ಮುಷ್ಠಿಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ವಸತಿ ಶಾಲೆ ಅಡಿಗಲ್ಲು ಸಮಾರಂಭ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು ಭಾಗವಹಿಸಿದ್ದರು. ಈ ಮುಂಚೆ ಸಿದ್ದರಾಮಯ್ಯ ಜೊತೆಗೆ ಇತಿಹಾಸ ಪ್ರಸಿದ್ಧ ಬಾದಾಮಿಯ ಬನಶಂಕರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ತಿರುವು ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ವಿದ್ಯುದ್ದೀಕರಣ ಕಾಮಗಾರಿಗೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಿದ್ದರಾಮಯ್ಯನವರು ಪೂಜೆ ಸಲ್ಲಿಸಿದರು. ಒಟ್ಟು 3.19 ಕೋಟಿ ರೂ.ಗಳ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗ್ತಿದೆ. 7 ಮೀಟರ್ ಅಗಲದ 700 ಮೀಟರ್ ಉದ್ದದ ಸಿಸಿ ರಸ್ತೆ ಹಾಗೂ ಬಾಕ್ಸ್ ಕಲವರ್ಟ್ ನಿರ್ಮಾಣ, ಅಗಲೀಕರಣಕ್ಕೆ ಪೂಜೆ ನಡೆದಿದೆ.
ಶ್ರೀ ಬನಶಂಕರಿ ದೇವಾಲಯದ ದರ್ಶನಕ್ಕೆ ಸಿದ್ದರಾಮಯ್ಯನವರು ಹಾಗೂ ಗೋವಿಂದ ಕಾರಜೋಳ ಮಾತ್ರ ತೆರಳಿದ್ದರು. ಸಚಿವ ಬಿ.ಶ್ರೀರಾಮಲು ಬಾದಾಮಿ ನಗರದಲ್ಲಿ ಇದ್ದರೂ ಸಹ ದೇವಸ್ಥಾನಕ್ಕೆ ಭೇಟಿ ನೀಡಲಿಲ್ಲ. ತದ ನಂತರ ಮುಷ್ಟಿಗೇರಿ ಗ್ರಾಮದಲ್ಲಿ ನಡೆದ ಅಡಿಗಲ್ಲು ಸಮಾರಂಭದಲ್ಲಿ ಶ್ರೀರಾಮಲು, ಸಿದ್ದರಾಮಯ್ಯನವರು ಮುಖಾಮುಖಿ ಭೇಟಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಳೆದ ವಿಧಾನಸಭೆ ಚುನಾವಣೆ ಬಳಿಕ ಇಬ್ಬರು ಇದೇ ಮೊದಲು ಬಾರಿಗೆ ಕ್ಷೇತ್ರದಲ್ಲಿ ಮುಖಾಮುಖಿಯಾಗಿರುವುದು ವಿಶೇಷ.