ಬಾಗಲಕೋಟೆ: ಬಾದಾಮಿ ಮತಕ್ಷೇತ್ರಕ್ಕೆ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಆಕಾಂಕ್ಷಿ ವಿಜಯಾನಂದ ಕಾಶಪ್ಪನವರ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ವೇಳೆ, ಕಾಶಪ್ಪನವರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಅಲ್ಲದೇ ಈ ಬಾರಿ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಗೆಲ್ಲಿಸಿಕೊಡಿ ಎಂದು ಕೇಳಿಕೊಂಡರು. ಅದಕ್ಕೆ ಸಿದ್ದರಾಮಯ್ಯ ಅವರು, ಈ ವರೆಗೂ ಸಹಕಾರಿ ಕ್ಷೇತ್ರದ ಚುನಾವಣಾ ವಿಚಾರವಾಗಿ ಕೈಹಾಕಿಲ್ಲ. ಆದರೆ, ನನ್ನ ಕೈಲಾದ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಅಮೆರಿಕದಲ್ಲಿ ಜೋ ಬೈಡನ್ ಗೆಲುವಿನ ಅವಶ್ಯಕತೆಯಿತ್ತು. ಅಲ್ಲಿನ ಜನ ಬದಲಾವಣೆ ಬಯಸಿದ್ದರು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಕೂಡ ಬೈಡನ್ ಗೆ ಮತ ಚಲಾಯಿಸಿದ್ದಾರೆ ಎಂಬುದು ನನಗೆ ದೊರಕಿರುವ ಮಾಹಿತಿ. ಅಲ್ಲಿ ಯಾವ ಮೋದಿಯ ಮಾತೂ ನಡೆದಿಲ್ಲ ಎಂದರು.
ಇನ್ನೂ ವಿನಯ್ ಕುಲಕರ್ಣಿ ಬಂಧನದ ವಿಚಾರವಾಗಿ ಮಾತನಾಡಿದ ಅವರು, ಇದು ಬಿಜೆಪಿಯವರ ರಾಜಕೀಯ ಪ್ರೇರಿತ ಕ್ರಮವಾಗಿದೆ. ತನಿಖೆ ಮುಗಿದು ಚಾರ್ಜ್ ಶೀಟ್ ಹಾಕಿದ ಮೇಲೆಯೂ ಮತ್ತೆ ಪ್ರಕರಣ ರಿ ಓಪನ್ ಮಾಡಿ ಮತ್ತೆ ಸಿಬಿಐಗೆ ಕೊಟ್ಟು ತನಿಖೆ ಮಾಡಿಸಿರೋದು ರಾಜಕೀಯ ಪ್ರೇರಿತವೇ ಅಲ್ಲವೇ? ಎಂದು ಪ್ರಶ್ನಿಸಿದರು.