ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.
ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಿತ್ತಾಪುರದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ ಚಾಲನೆ ನೀಡಿದರು. ಇದಕ್ಕೂ ಮುನ್ನ ಜಯಂತಿ ಅಂಗವಾಗಿ ನಗರೇಶ್ವರ ಶಾಲೆಯಿಂದ ರಂಗಮಂದಿರದವರೆಗೆ ಅಪ್ಪಣ್ಣ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ದಂಡೆ, ಹಡಪದ ಅಪ್ಪಣ್ಣನವರ ಕುರಿತು ವಿಷೇಶ ಉಪನ್ಯಾಸ ನೀಡಿದರು. ಹಡಪದ ಸಮಾಜ ಮುಖಂಡ ಈರಣ್ಣಾ ಹಡಪದ್, ತಹಶೀಲ್ದಾರ್ ಸಂಜುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸೇರಿದಂತೆ ಇತರರು ಇದ್ದರು.
ಇನ್ನು ಬಾಗಲಕೋಟೆಯಲ್ಲಿ ಅನಾದಿ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಆಯಾ ಪಡೆಯುವ ಪದ್ಧತಿಯಲ್ಲಿ ಕಾಯಕ ಜೀವಿಗಳಾಗಿದ್ದ ಹಡಪದ ಸಮಾಜ ಬಾಂಧವರು, ಎಲ್ಲ ಜನಾಂಗದವರ ಜೊತೆ ಸ್ನೇಹ ಜೀವಿಗಳಾಗಿದ್ದರೆಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ನವನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲಿನಿಂದಲೂ ಸಮಾಜ ಶೋಷಣೆಗೊಳಗಾಗಿದ್ದು, ಇದಕ್ಕೆ ಬಡತನ, ಅನಕ್ಷರತೆ ಕಾರಣವಾಗಿದೆ ಎಂದರು.