ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಪ್ರವಾಹದಿಂದ ಹಾನಿಗೊಳಪಟ್ಟ ಶಾಲೆ, ಅಂಗನವಾಡಿ, ರಸ್ತೆ ಹಾಗೂ ಹೆಸ್ಕಾಂ ಕಾಮಗಾರಿ ಸೇರಿದಂತೆ ಇತರೆ ದುರಸ್ಥಿ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಧೋಳ ತಾಲೂಕಿನ ಉತ್ತೂರಿನಲ್ಲಿ ಹೆಸ್ಕಾಂ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ರಸ್ತೆ ದುರಸ್ಥಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳ ಪರಿಶೀಲನೆ ನಡೆಸಿದರು. ರಂಜನಗಿ ಗಾಮದಲ್ಲಿ ಕೈಗೊಳ್ಳದಾದ ವಿದ್ಯುತ್ ಕಾಮಗಾರಿಗಳನ್ನು ಸಹ ಪರಿಶೀಲನೆ ನಡೆಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ವಾಲ್ಮಿಕಿ ಭವನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗಿರಿಗಾಂವ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಚಿಚಖಂಡಿ ಕೆ.ಡಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ಹಾಗೂ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಹೆಬ್ಬಾಳ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳನ್ನು ಮಾತನಾಡಿಸಿದರು. ಶಾಲಾ ದುರಸ್ಥಿ ಕಾರ್ಯ ಪರಿಶೀಲನೆ ನಡೆಸಿದರು.