ಬಾಗಲಕೋಟೆ: ಬಸವಣ್ಣನ ಐಕ್ಯ ಸ್ಥಳ ಕೂಡಲಸಂಗಮಕ್ಕೆ ಅಧಿಕ ಮಾಸದ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿರುತ್ತಾರೆ. ಆದರೆ, ಪ್ರಾಧಿಕಾರ ಮಂಡಳಿಯ ನಿರ್ಲಕ್ಷ್ಯದಿಂದ ಅಸ್ವಚ್ಛತೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆ ಸ್ಥಳೀಯ ಯುವಕರ ಸಂಘಟನೆಯು ಕೂಡಲ ಸಂಗಮ ರಕ್ಷಿಸಿ ಅಭಿಯಾನ ಪ್ರಾರಂಭಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಪ್ರತಿ ಭಾನುವಾರ ಬೆಳಗ್ಗೆ ಸ್ವಚ್ಛತಾ ಅಭಿಯಾನ ಪ್ರಾರಂಭಿಸಿದ್ದು, ಬಸವಣ್ಣನವರ ಐಕ್ಯ ಮಂಟಪ, ಸಂಗಮೇಶ್ವರ ದೇವಸ್ಥಾನ ಆವರಣ, ಉದ್ಯಾನ ಸ್ವಚ್ಛಗೊಳಿಸುತ್ತಿದ್ದಾರೆ. ಪ್ರಾಧಿಕಾರದ ನಿರ್ಲಕ್ಷ್ಯದಿಂದ ಕೂಡಲಸಂಗಮ ವಾತಾವರಣ ಹದಗೆಡುತ್ತಿರುವ ಆರೋಪ ಕೇಳಿ ಬಂದ ಕಾರಣ ಸ್ವಚ್ಚತಾ ಕಾರ್ಯ ಪ್ರಾರಂಭಿಸಿದ್ದಾರೆ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸರಿಯಾಗಿ ಕುಡಿವ ನೀರು, ಶೌಚಾಲಯ ವ್ಯವಸ್ಥೆಯನ್ನು ಪ್ರಾಧಿಕಾರ ಮಾಡುತ್ತಿಲ್ಲ. ಪ್ರಾಧಿಕಾರದಲ್ಲಿ 6 ಅಧಿಕಾರಿ, ಸಿಬ್ಬಂದಿ ಹಾಗೂ 90 ಕಾರ್ಮಿಕರು ಕೆಲಸ ಮಾಡುತ್ತಾರೆ. ಪ್ರತಿ ತಿಂಗಳು 18 ರಿಂದ 20 ಲಕ್ಷ ರೂ. ವೇತನ, ಕೂಲಿ ಪಾವತಿಸಲಾಗುತ್ತದೆ. ಕಾಯಕ ಯೋಗಿಯ ನೆಲದಲ್ಲಿ ಪ್ರಾಧಿಕಾರದ ಸಿಬ್ಬಂದಿ ತಮ್ಮ ಕಾಯಕ ಮಾಡದೇ ಕೇವಲ ವೇತನ ಮಾತ್ರ ಪಡೆಯುತ್ತಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಅಧಿಕಾರಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಇದರಿಂದ ಬೇಸತ್ತ ಗ್ರಾಮದ ಯುವಕರು ಸ್ವಚ್ಛತಾ ಕಾರ್ಯಕ್ಕೆ ಪಣತೊಟ್ಟಿದ್ದಾರೆ. ಪ್ರತಿ ಭಾನುವಾರ ಕೂಡಲಸಂಗಮ ಸ್ವಚ್ಛಗೊಳಿಸಿ ಪ್ರಾಧಿಕಾರದ ವಿರುದ್ಧ ವಿನೂತನ ಹೋರಾಟ ನಡೆಸುವುದಾಗಿ ಯುವಕರು ತಿಳಿಸಿದ್ದಾರೆ.