ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಗುವ ಯೋಗ್ಯತೆ ಇರುವ ಅಭ್ಯರ್ಥಿಗಳು ಬಹಳಷ್ಟಿದ್ದಾರೆ. ಆ ಪಟ್ಟಿಯಲ್ಲಿ ಎಸ್.ಆರ್.ಪಾಟೀಲರು ಸಹ ಪ್ರಮುಖರು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು. ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳು ಕಾಂಗ್ರೆಸ್ನಲ್ಲಿ ಹೆಚ್ಚಿದ್ದಾರೆ. ಹೀಗಾಗಿ ಸ್ಪರ್ಧೆ ಇರುತ್ತದೆ. ಈ ರೀತಿಯ ಆರೋಗ್ಯಕರ ಸ್ಪರ್ಧೆ ಒಳ್ಳೆಯದು. ಯಾವುದೇ ರೀತಿ ಅನಾರೋಗ್ಯಕರ ಬೆಳವಣಿಗೆ ಇರಬಾರದಷ್ಟೇ ಎಂದು ಅವರು ಹೇಳಿದರು.
ಮೂಲೆ ಗುಂಪು ರಾಜಕಾರಣ: ಎಸ್.ಆರ್.ಪಾಟೀಲರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನಲ್ಲಿ ಯಾರನ್ನೂ ಮೂಲೆ ಗುಂಪು ಮಾಡಲಾಗುವುದಿಲ್ಲ. ಅವರವರ ಕೆಲಸ ಗುರುತಿಸಿ ಹುದ್ದೆಗಳನ್ನು ಕೊಡಲಾಗುತ್ತದೆ ಎಂದರು.
ಜಾತಿ ಅಸ್ತ್ರ ತಪ್ಪು ಚಿಂತನೆ: ಜಾತಿ ಅಸ್ತ್ರ ಉಪಯೋಗ ಮಾಡಿಕೊಳ್ಳೋದು ನೂರಕ್ಕೆ ನೂರು ತಪ್ಪು. ಜಾತಿ ಅಸ್ತ್ರ ಉಪಯೋಗ ಮಾಡಿಕೊಂಡು, ಈ ರಾಜ್ಯದಲ್ಲಿ ಯಾರೂ ಮುಖ್ಯಮಂತ್ರಿ ಆಗಲ್ಲ. ನಮ್ಮ ಸಮುದಾಯದಲ್ಲಿ ನಾನು ಒಬ್ಬನೇ ಇದ್ದರೂ ಎಲ್ಲ ಎಂಎಲ್ಎಗಳು ಸೇರಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದರು. ಆದ್ದರಿಂದ, ಜಾತಿ ಆಧಾರದ ಮೇಲೆ, ಬರೀ ಒಂದು ಜಾತಿಯವರು ಸೇರಿದರೆ ಮುಖ್ಯಮಂತ್ರಿ ಆಗೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಭಿಮಾನಿಗಳು ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು: ಇದೇ ಸಮಯದಲ್ಲಿ ಸಿದ್ದರಾಮಯ್ಯ ವ್ಯಕ್ತಿ ಪೂಜೆ ವಿಚಾರವಾಗಿ ಮಾತನಾಡಿ, ಸಿದ್ದರಾಮೋತ್ಸವ ಅಲ್ಲ ಅಂತ ಅವರೇ ಹೇಳಿದ್ದಾರೆ. ಎಲ್ಲ ಅಭಿಮಾನಿಗಳಿಗೆ ಒಂದು ಲಕ್ಷ್ಮಣ ರೇಖೆ ಹಾಕಬೇಕು. ಪಕ್ಷದ ಸಂಯಮ ಲಕ್ಷ್ಮಣ ರೇಖೆ. ಅದನ್ನು ಮೀರಿ ಹೋದರೆ ರಾವಣ ಸೀತೆಯನ್ನು ಎತ್ತಿಕೊಂಡು ಹೋದಂತೆ ಆಗುತ್ತದೆ ಎಂದು ಎಚ್ಚರಿಸಿದರು.
ರಾಜಕೀಯವಾಗಿ ನಾವೆಂದೂ ವೈಯಕ್ತಿಕವಾದ ವೈಭವೀಕರಣ ಮಾಡಬಾರದು. ಇದನ್ನು ಮಾಡ್ತಿಲ್ಲ ಅಂತ ಅವರೇ ಹೇಳಿದ್ದಾರೆ. ಇದನ್ನು ಪಕ್ಷದ ಸಂಘಟನೆಗೆ ಉಪಯೋಗ ಮಾಡಿಕೊಳ್ಳಲಿ ಅಂತ ಅವರೇ ಹೇಳಿದ್ದಾರೆ. ಹೀಗಾಗಿ ನಾನು ಸಹ ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದು ಮೊಯ್ಲಿ ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಅದ್ಧೂರಿ ವೇದಿಕೆ, ಸಕಲ ಸಿದ್ಧತೆ