ಬಾಗಲಕೋಟ : ಇತ್ತೀಚೆಗೆ ಮುದ್ದೇಬಿಹಾಳ ತಾಲೂಕಿನ ಕಂದಗನೂರನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶಿವಾನಂದ ಪಾಟೀಲರು ಪ್ರತಿ ಕುಟುಂಬಕ್ಕೆ ನೀಡಿದ್ದ 2 ಲಕ್ಷ ರೂಪಾಯಿ ಪರಿಹಾರವನ್ನು ಸಂತ್ರಸ್ತರಿಗೆ ತಲುಪಿಸಲಾಯಿತು.
ಅಪಘಾತದಲ್ಲಿ ಮೃತಪಟ್ಟ ಬಾಗಲಕೋಟೆ ತಾಲೂಕು ಬೂಮ್ಮಣಗಿಯ ಬಂದಗಿಸಾಬ ಲಾಲಾಸಾಬ ಮೂಕಾಶಿ ಹಾಗೂ ಶ್ರೀಮತಿ ಹುಣಬುಡ್ಡಿ ಜಲಾಲಸಾಬ ಮೂಕಾಶಿ ಇವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿಗಳನ್ನು ಮಾಜಿ ಸಚಿವ ಹೆಚ್.ವೈ. ಮೇಟಿ ತಲುಪಿಸಿದ್ದಾರೆ.
ಅಪಘಾತದಲ್ಲಿ ಒಟ್ಟು ಐದು ಜನ ಮೃತಪಟ್ಟಿದ್ದರು. ಗುಳೇದಗುಡ್ಡ ತಾಲೂಕಿನ ಹಳದೂರ ಗ್ರಾಮದ ಮೂವರು ಹಾಗೂ ಬಾಗಲಕೋಟೆ ತಾಲೂಕಿನ ಬೂಮ್ಮಣಗಿಯ ಇಬ್ಬರು, ಅಪಘಾತದಲ್ಲಿ ಮೃತಪಟ್ಟ ಪ್ರತಿ ಕುಟುಂಬಕ್ಕೆ ಬಾದಾಮಿ ಶಾಸಕ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಲಾ ಒಂದು ಲಕ್ಷ ರೂ. ವೈಯಕ್ತಿಕ ಪರಿಹಾರವನ್ನು ಘೋಷಿಸಿದ್ದರು. ಅಲ್ಲದೆ ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕಿಸಿ ಕೊಡುವುದಾಗಿಯೂ ಭರವಸೆ ನೀಡಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ ಬಿ ಸೌದಾಗರ, ಜಿಲ್ಲಾ ವಕ್ತಾರ ಆನಂದ ಜಿಗಜಿನ್ನಿ, ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಕಾಂಗ್ರೆಸ ಮುಖಂಡ ಹೊಳಬಸು ಶೆಟ್ಟರ್, ಗ್ರಾಮಿಣ ಅಧ್ಯಕ್ಷ ರಾಂಪೂರ, ಚನ್ನವೀರ ಅಂಗಡಿ, ಬೂಮ್ಮಣಗಿ ಗ್ರಾಮದ ಶೇಖನ್ನಾ ನಾಲತವಾಡ, ಯಮನಪ್ಪ ಹುಲ್ಯಾಳ, ಬಸವರಾಜ ರಾಮವಾಡಗಿ ಮತ್ತಿತರರು ಇದ್ದರು.