ಬಾಗಲಕೋಟೆ: ಬಸವ ಜಯಂತಿ ಹಿನ್ನೆಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇಂದು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬಸವಣ್ಣನವರ ನಾಡು, ಧಾರ್ಮಿಕ ಕೇಂದ್ರ ಕೂಡಲಸಂಗಮಕ್ಕೆ ಭೇಟಿ ನೀಡಿದರು. ತ್ರಿವೇಣಿ ಸಂಗಮದಲ್ಲಿರುವ ಐಕ್ಯ ಸ್ಥಳ ಹಾಗೂ ಸಂಗಮನಾಥ ದೇವರ ದರ್ಶನ ಪಡೆದುಕೊಂಡರು. ಸಂಗಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಣೆಗೆ ವಿಭೂತಿ ಹಚ್ಚಿಕೊಂಡು ದೇವಾಲಯದಿಂದ ಹೂರಗೆ ಬಂದರು. ನಂತರ ಬಸವಣ್ಣನವರ ಐಕ್ಯ ಸ್ಥಳ, ತ್ರಿವೇಣಿ ನದಿಗಳ ಸಂಗಮ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ ಸೇರಿದಂತೆ ಇತರೆ ಗಣ್ಯರು ಸಾಥ್ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಲಿಂಗಾಯತ ನಾಯಕರನ್ನು ಕಡೆ ಗಣಿಸುತ್ತಿದ್ದಾರೆ ಎಂಬ ಚರ್ಚೆಯ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಗಮನಾಥನ ದರ್ಶನ ಪಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.
ರಾಹುಲ್ ಗಾಂಧಿ ಪ್ರಯಾಣ: ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಯಿಂದ ಹೈದರಾಬಾದ್ ತಲುಪಿ ಅಲ್ಲಿಂದ ಹುಬ್ಬಳ್ಳಿಗೆ ಭೇಟಿ ಕೊಟ್ಟಿದ್ದರು. ಬಳಿಕ ಅಲ್ಲಿಂದ ಅವರು ಕೂಡಲಸಂಗಮಕ್ಕೆ ಭೇಟಿ ನೀಡಿ, ಸಂಗಮನಾಥನ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಬಸವೇಶ್ವರರ ಚಿಂತನೆಗಳು ಮಾನವೀಯತೆಯ ಸೇವೆಗೆ ಸ್ಫೂರ್ತಿ: ಕನ್ನಡದಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ