ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದ್ದರಿಂದಲೇ ಅವರು ತಮ್ಮ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿಸಿ ಕೊಳ್ಳುತ್ತಿದ್ದಾರೆ. ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲ್ಲ. ಎಂದು ಬಿಜೆಪಿ ಮುಖಂಡ ಹಾಗೂ ಶಾಸಕರಾದ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಮತ್ತೆ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ. ಕೆಲವು ಶಾಸಕರಿಂದ ಹಾಗೆ ಹೇಳಿಸಿಕೊಂಡು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಈ ಜನ್ಮದಲ್ಲಿ ಮದುವೆ ಆಗುವುದಿಲ್ಲ. ಅದೇ ರೀತಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಮೇ 23 ರ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ರಾಜ್ಯದ ಜನರ ಭಾವನೆ ಬಿಜೆಪಿ ಪರವಿದ್ದು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗಳಿಸುತ್ತದೆ, ಬೈ ಎಲೆಕ್ಷನ್‍ನಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದ್ದು, ಸಂಖ್ಯಾ ಬಲ 104 ಇದ್ದಿದ್ದು 106 ಆಗುತ್ತೇ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್, ಜೆಡಿಎಸ್ ಅತೃಪ್ತರು ಬಹಳ ಜನ ಬಿಜೆಪಿಗೆ ಬರ್ತಾರೆ, ರಮೇಶ ಜಾರಕಿಹೊಳಿ ಸೇರಿದಂತೆ ಅನೇಕರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಹಾಗಾಗಿ ಬಿಜೆಪಿ ನಾಯ ಕರೆಲ್ಲರೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ಇದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಈಗ ಎರಡು ಗುಂಪಾಗಿವೆ. ದಿನೇಶ ಗುಂಡೂರಾವ್, ಖರ್ಗೆ, ಪರಮೇಶ್ವರ್ ಒಂದು ಗುಂಪು, ಸಿದ್ದರಾಮಯ್ಯ, ಬೈರತಿ ಬಸವರಾಜ್ ಸೇರಿ ಇನ್ನೊಂದು ಗುಂಪು ಎಂದರು. ಸಿದ್ದರಾಮಯ್ಯನವರು ಏಕವಚನದಲ್ಲಿ ಮಾತನಾಡುವದು ಸರಿಯಲ್ಲ, ನಮಗೂ ಏಕವಚನದಲ್ಲಿ ಮಾತನಾಡೋಕೆ ಬರುತ್ತೆ ಅವರು ಸಿಎಂ ಆಗಿದ್ದವರು ಅದಕ್ಕೆ ಗೌರವ ಕೊಡುತ್ತೇನೆ ಎಂದರು.