ಬಾಗಲಕೋಟೆ: ಬಿಜೆಪಿ ಸರ್ಕಾರ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಾಗಲಕೋಟೆ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಾತ್ಯತೀತ ಜನತಾದಳ ಜಿಲ್ಲಾ ಅಧ್ಯಕ್ಷರಾದ ಹನುಮಂತ ಮಾವಿನಮರದ, ತಾಲೂಕು ಅಧ್ಯಕ್ಷರಾದ ಸಲೀಂ ಮೋಮಿನ, ರಾಜ್ಯ ಕಾರ್ಯದರ್ಶಿ ರವಿ ಹುಣಶ್ಯಾಳ ಹಾಗೂ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿಗಳಾದ ಶರಣು ಹುರಕಡ್ಲಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಹನುಮಂತ ಮಾವಿನಮರದ ಮಾತನಾಡಿ, ರಾಜ್ಯದಲ್ಲಿ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ರೈತವಿರೋಧಿ ನೀತಿ, ಕಾರ್ಮಿಕ ವಿರೋಧಿ ನೀತಿ ಅನುಸರಿಸಿ ಸುಗ್ರೀವಾಜ್ಞೆ ಮುಖಾಂತರ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ , ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ 1966 ಹಾಗೂ ಕೈಗಾರಿಕಾ ವಾಣಿಜ್ಯ ಕಾಯ್ದೆ 1947, ಕಾರ್ಖಾನೆಗಳ ಕಾಯ್ದೆ 1948 ಮತ್ತು ಗುತ್ತಿಗೆ ಕಾರ್ಮಿಕ ಕಾಯ್ದೆ 1970 ಗಳಿಗೆ ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಸುಗ್ರೀವಾಜ್ಞೆ ಮುಖಾಂತರ ತರಾತುರಿಯಲ್ಲಿ ಜಾರಿಗೆ ತಂದಿದೆ. ಇಂತಹ ಸರ್ಕಾರಕ್ಕೆ ಧಿಕ್ಕಾರ ಕೂಗುವ ಮೂಲಕ ಧಿಕ್ಕರಿಸಬೇಕು ಎಂದು ಹೇಳಿದರು. ನಂತರ ತಮ್ಮ ವಿವಿಧ ಬೇಡಿಕೆ ಇರುವ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿದರು.