ಬಾಗಲಕೋಟೆ: 'ಬೇಟಿ ಬಚಾವೋ-ಬೇಟಿ ಪಡಾವೋ' ಯೋಜನೆಯಡಿ 'ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ' ಜಾಗೃತಿ ಜಾಥಾಕ್ಕೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು. ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗಿ ಹಳೆ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಅಂಬೇಡ್ಕರ್ ಪುತ್ಥಳಿ ಮಾರ್ಗವಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿ ಸಮಾಪ್ತಿಗೊಂಡಿತು.
ಬಾ ಬಾಲೆ ಶಾಲೆಗೆ ನೀನಾಗು ಏಳಿಗೆ, ತಾಯಿ ಬೇಕು, ಪತ್ನಿ ಬೇಕು, ತಂಗಿ ಬೇಕು. ಮಗಳೇಕೆ ಬೇಡ? ಎಂಬ ಘೋಷಣಾ ಫಲಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಬಸವೇಶ್ವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ, ವಿವೇಕಾನಂದ ಪ್ರಾಥಮಿಕ ಶಾಲೆ, ಸರ್ಕಾರಿ ಬಾಲಕಿಯರ ಪದವೀ ಪೂರ್ವ ಕಾಲೇಜು, ಲಯನ್ಸ್ ಸ್ಕೂಲ್ ಸೇರಿದಂತೆ ಹಲವು ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.