ಬಾಗಲಕೋಟೆ : ಜಿಲ್ಲೆಯಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದ್ದು, ಖಾಸಗಿ ವೈದ್ಯರನ್ನೂ ಸಹ ಕೊರೊನಾ ಬೆಂಬಿಡದೆ ಕಾಡತೊಡಗಿದೆ. ಇದು ವೈದ್ಯ ಲೋಕದಲ್ಲೇ ತಲ್ಲಣ ಸೃಷ್ಟಿಸಿದ್ದು, ಆರೋಗ್ಯ ಸಿಬ್ಬಂದಿಯ ಹಿತದೃಷ್ಠಿಯಿಂದ ಖಾಸಗಿ ವೈದ್ಯರೇ ಸೇರಿ ಖಾಸಗಿ ಕೋವಿಡ್ ಆಸ್ಪತ್ರೆಯೊಂದನ್ನ ನಿರ್ಮಾಣ ಮಾಡಿದ್ದಾರೆ.
ಡಾ.ಸುಭಾಷ್ ಪಾಟೀಲ್ ನೇತೃತ್ವದಲ್ಲಿ ನವನಗರದ ದಡ್ಡೇನ್ನವರ ಆಸ್ಪತ್ರೆಯನ್ನು ಖಾಸಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ. 40 ಹಾಸಿಗೆಯ ಕೋವಿಡ್ ಆಸ್ಪತ್ರೆ ಇದಾಗಿದ್ದು, ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ಹರಡಿದ್ರೆ, ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನ್ಯುಮೋನಿಯಾ, ಬಿಪಿ, ಶುಗರ್ ಹಾಗೂ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಸಹ ಮಾಡಲಾಗಿದೆ. ವೆಂಟಿಲೇಶನ್, ಇನ್ಸೋಲೇಷನ್ ಹಾಗೂ ಮಾನಿಟರ್ ಮೂಲಕ ಚಿಕಿತ್ಸೆ ನೀಡುವ ಹೈಟೆಕ್ ಸೌಲಭ್ಯಗಳನ್ನೊಳಗೊಂಡ ವ್ಯವಸ್ಥೆಯೂ ಸಹ ಇಲ್ಲಿದೆ.
ನಗರದಲ್ಲಿರುವ ಖಾಸಗಿ ವೈದ್ಯರೆಲ್ಲರೂ ಸೇರಿ ಹಣ ಸಂಗ್ರಹಿಸಿ ಲಕ್ಷಾಂತರ ರೂ. ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಈ ಆಸ್ಪತ್ರೆಯಲ್ಲಿ ಮೊದಲ ಆದ್ಯತೆ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ನೀಡಲಾಗಿದೆ. ಜಿಲ್ಲಾಡಳಿತ ಸೂಚನೆ ನೀಡಿದ್ರೆ, ಬೇರೆ ಸೋಂಕಿತರಿಗೂ ಸಹ ಚಿಕಿತ್ಸೆ ನೀಡಲಾಗುವುದು ಎಂದು ಹೃದಯ ರೋಗ ತಜ್ಞರಾದ ಡಾ.ಸುಭಾಷ್ ಪಾಟೀಲ್ ತಿಳಿಸಿದ್ದಾರೆ.