ಬಾಗಲಕೋಟೆ: ತುಳಸಿಗೇರಿ ಮಾರುತೇಶ್ವರ ದೇವಾಲಯದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಭಕ್ತರ ಮೇಲೆ ಹಲ್ಲೆ ಮಾಡಿದ್ದಾರೆ.
ಕಾರ್ತಿಕೋತ್ಸವ ಜಾತ್ರೆ ಹಿನ್ನೆಲೆ ತುಳಸಿಗೇರಿ ಮಾರುತೇಶ್ವರ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಪ್ರದೇಶಗಳಿಂದ ಭಕ್ತರು ಬಂದು ದರ್ಶನ ತೆಗೆದುಕೊಂಡು ಭಕ್ತಿಯನ್ನು ಮೆರೆಯುತ್ತಾರೆ. ಇಂತಹ ಸಮಯದಲ್ಲಿ ಸರದಿ ಸಾಲಿನಲ್ಲಿ ನಿಂತ ಭಕ್ತರೊರ್ವರು, ನೇರವಾಗಿ ಕೆಲವರನ್ನು ದರ್ಶನಕ್ಕೆ ಬಿಡುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ನಗರದ ತುಳಸಿಗೇರಿ ಮಾರುತೇಶ್ವರ ದೇವಾಲಯದ ಅತಿಥಿ ಗೃಹದ ಉದ್ಘಾಟನಾ ಕಾರ್ಯಕ್ರಮವಿತ್ತು. ಇದಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆಗಮಿಸಿದ್ದರು. ಅವರ ಆಗಮನಕ್ಕೂ ಮೊದಲು ಈ ಘಟನೆ ನಡೆದಿದ್ದು, ಹಲ್ಲೆ ಮಾಡುತ್ತಿರುವ ದೃಶ್ಯ ಈ ಟಿವಿ ಭಾರತ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಲ್ಲೆಗೊಳಗಾದವರು ನೀರಾವರಿ ಇಲಾಖೆಯ ನಿವೃತ್ತ ನೌಕರ ಎಂದು ತಿಳಿದು ಬಂದಿದೆ. ಹಲ್ಲೆಯಿಂದಾಗಿ ಶರ್ಟ್ ಹರಿದು ಹೋಗಿದ್ದು, ಜೊತೆಗೆ ಅವರು ಮೊಬೈಲ್ ಕಳೆದುಕೊಂಡಿದ್ದಾರೆ. ಘಟನೆಯಿಂದ ಆತಂಕಗೊಂಡಿರುವ ವ್ಯಕ್ತಿಯು ಮಾಧ್ಯಮದವರೊಂದಿಗೆ ಮಾತನಾಡಲು ಕೂಡ ಭಯಗೊಂಡರು. ತಮ್ಮ ಊರು, ಹೆಸರು ಯಾವುದನ್ನೂ ಹೇಳಲು ನಿರಾಕರಿಸಿದರು.