ಬಾಗಲಕೋಟೆ: ಅಕ್ಟೋಬರ್ 15ರಿಂದ ಶಾಲಾ-ಕಾಲೇಜುಗಳ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯದಲ್ಲಿ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಶಾಲಾ-ಕಾಲೇಜು ಪ್ರಾರಂಭಿಸಬೇಕೇ, ಬೇಡವೇ ಎಂಬುದರ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ವಿದ್ಯಾಗಮ ಯೋಜನೆಯನ್ನು ಸರ್ಕಾರ ಆರಂಭಿಸಿತು. ನೂರಕ್ಕೂ ಅಧಿಕ ಶಿಕ್ಷಕರು ಕೊರೊನಾ ಸೋಂಕಿಗೆ ಒಳಗಾಗಿದ್ದು, ಅವರಿಂದ ಮಕ್ಕಳಿಗೂ ಸೋಂಕು ತಗಲುವ ಭೀತಿ ಎದುರಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 17 ಶಿಕ್ಷಕರು ಸೇರಿ ರಾಜ್ಯದಲ್ಲಿ ಅದೆಷ್ಟೋ ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆ.
ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿತು. ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಬೀಳುವ ಹಂತದಲ್ಲಿ ಕೆಲ ಶಾಲೆಗಳಿವೆ. ಹೀಗಾಗಿ ಅವುಗಳ ಕಡೆ ಸರ್ಕಾರ ಮೊದಲು ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಮಖಂಡಿ ಪಟ್ಟಣ ಸರ್ಕಾರಿ ಉರ್ದು ಶಾಲೆಯ ಗೋಡೆಗಳು ಮತ್ತು ಶೌಚಾಲಯದ ಕಟ್ಟಡ ಬಿರುಕು ಬಿಟ್ಟಿದ್ದು, ಬೀಳುವ ಹಂತಕ್ಕೆ ತಲುಪಿದೆ. ಶಾಲೆ ಬಂದ್ ಆದಾಗಿನಿಂದಲೂ ಸ್ವಚ್ಛತಾ ಕಾರ್ಯ ಇಲ್ಲದೆ ಎಲ್ಲವೂ ಧೂಳುಗಟ್ಟಿದೆ. ಒಂದು ವೇಳೆ ಶಾಲೆ ಆರಂಭಿಸಿದರೆ ಮಕ್ಕಳು ಭಯದಿಂದ ಪಾಠ ಕಲಿಯಬೇಕಿದೆ. ಜಿಲ್ಲೆಯಲ್ಲಿರುವ ಇಂತಹ ಶಾಲೆಗಳ ಸರ್ವೇ ಕಾರ್ಯ ನಡೆಸಿ ದುರಸ್ತಿ ಮಾಡಿಸಬೇಕಿದೆ. ಇದು ಕೊರೊನಾಗಿಂತ ಹೆಚ್ಚು ಭಯಾನಕವಾಗಿವೆ.