ಬಾಗಲಕೋಟೆ: ಮೀಸಲಾತಿ ಹೋರಾಟದಲ್ಲಿ ಸಚಿವ ನಿರಾಣಿ ಅವರಿಗೆ ಕಳಕಳಿ ಇದ್ದರೆ ರಾಜೀನಾಮೆ ನೀಡಲಿ. ನಿರಾಣಿ ಅವರನ್ನು ಯಾವ ಆಧಾರದ ಮೇಲೆ ಮಂತ್ರಿ ಮಾಡಿದ್ದಾರೆ ಗೊತ್ತಲ್ಲ. ಪಂಚಮಸಾಲಿ ಜಾತಿಗೆ ಸಚಿವ ಸ್ಥಾನ ಕೊಡಬೇಕೆಂದು ಮಾಡಿದ್ದಾರೆ. ತಾಕತ್ ಇದ್ದರೆ ರಾಜೀನಾಮೆ ಕೊಡಲಿ ನೋಡೋಣ ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ್ ಯತ್ನಾಳ ಸವಾಲೆಸೆದರು.
'ಮಂತ್ರಿ ಆಗೋದ್ರಿಂದ ಏನೂ ಸಾಧ್ಯವಿಲ್ಲ': ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2 (ಎ) ಮೀಸಲಾತಿ ನೀಡುವಂತೆ ಆಗ್ರಹಿಸಿ ಮತ್ತೆ ನಡೆಸುವ ಹೋರಾಟದ ಬಗ್ಗೆ ಸಭೆ ನಡೆಸಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ನೀಡುವಲ್ಲಿ ವಿಜಯೇಂದ್ರ ಮೂಲಕ ಅಂದಿನ ಸಿಎಂ ಬಿಎಸ್ವೈಗೆ ನಿರಾಣಿ ಮಿಸ್‌ಗೈಡ್ ಮಾಡಿದ್ದರು. ವಿಜಯೇಂದ್ರ ಮತ್ತು ನಿರಾಣಿ ಎಲ್ಲರೂ ಒಂದೇ, ವಿಜಯೇಂದ್ರ ಇಡೀ ಲಿಂಗಾಯತರ ಮುಖಂಡನಾಗಬೇಕಂತಿದ್ದಾನೆ. ಹೀಗೆಲ್ಲಾ ಮಾಡಿದ್ರೆ ಅವರ ಕೈಯಲ್ಲಿ ಲಿಂಗಾಯತರು ಹೇಗೆ ಉಳಿಯುತ್ತಾರೆ. 70% ಲಿಂಗಾಯತರು ವಿಜಯೇಂದ್ರನ ಲೀಡರ್ಶಿಪ್ ಕೈಬಿಟ್ಟಿದ್ದಾರೆ. ಮೀಸಲಾತಿಗಾಗಿ ನಮ್ಮ ಹೋರಾಟ, ಮಂತ್ರಿ ಆಗೋದ್ರಿಂದ ಏನು ಸಾಧ್ಯವಿಲ್ಲ ಎಂದು ಯತ್ನಾಳ ಹೇಳಿದರು.
ಇದನ್ನೂ ಓದಿ: ಕಾಟನ್‌ಪೇಟೆಯಲ್ಲಿ ಅಡಗಿದ್ದ ಹುಬ್ಬಳ್ಳಿ ಗಲಭೆಕೋರರು ಪೊಲೀಸ್ ವಶಕ್ಕೆ
ಇದೇ ಸಮಯದಲ್ಲಿ ಎಸ್‌ಡಿಪಿಐ ಜೊತೆ ಆರ್‌ಎಸ್‌ಎಸ್ ನಿಷೇಧ ಮಾಡಬೇಕೆನ್ನುವ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಂ.ಬಿ.ಪಾಟೀಲ್ ಯಾಕೋ ಹಾದಿಬಿಟ್ಟು ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಬಗ್ಗೆ ಮಾತನಾಡೋಕೆ ಅವರಿಗೆ ನೈತಿಕ ಹಕ್ಕಿಲ್ಲ. ಹಾಗೆ ನೋಡಿದ್ರೆ ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಬ್ಯಾನ್ ಮಾಡಬೇಕು ಎಂದರು.