ಬಾಗಲಕೋಟೆ: ಇಡೀ ದೇಶ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ನೀಡುವತ್ತ ಗಮನ ಹರಿಸಿದ್ರೆ, ಗ್ರಾಮೀಣ ಪ್ರದೇಶದ ಜನ ಕೊರೊನಾ ಹೋಗಲಾಡಿಸಲು ದೈವದ ಮೊರೆ ಹೋಗಿದ್ದಾರೆ.
ಬಾಗಲಕೋಟೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ದೇವತೆಗಳಿಗೆ ವಾರ ಹಿಡಿದು, ಪೂಜೆ, ಪುನಸ್ಕಾರ ಮಾಡುವ ಮೂಲಕ ಮಹಾಮಾರಿ ತೊಲಗಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮದಲ್ಲಿ ಕೊರೊನಾ ರೋಗದಿಂದ ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗಬಾರದೆಂದು ಮುತ್ತೈದೆಯರು ಹಾಗೂ ಚಿಕ್ಕ ಮಕ್ಕಳು ಗ್ರಾಮದಲ್ಲಿರುವ ಪ್ರತಿಯೊಂದು ದೇವರಿಗೆ ಕೃಷ್ಣಾ ನದಿಯಿಂದ ಮಡಿ ನೀರು ತಂದು ದೇವರ ಗುಡಿಗೆ ನೀರು ಹಾಕಿದ್ದಾರೆ.
2020ರಲ್ಲಿ ಕೊರೊನಾದಿಂದ ಹಲವಾರು ಜನರು ಸಾವಿಗೀಡಾದರು. ಆ ಸಂದರ್ಭದಲ್ಲಿ ಗ್ರಾಮ ದೇವಿ ದುರ್ಗಾ ಮಾತೆಯ ಜಾತ್ರೆ ಮಾಡಿದಾಗ ಗ್ರಾಮದಲ್ಲಿ ರೋಗ ಕಡಿಮೆಯಾಯ್ತು ಅಂತಾರೆ ಇಲ್ಲಿನ ಗ್ರಾಮಸ್ಥರು. ಹೀಗಾಗಿ ಈ ಬಾರಿಯು ಕೊರೊನಾ ತಾಂಡವವಾಡುತ್ತಿರುವುದರಿಂದ ಗ್ರಾಮದಲ್ಲಿ ಶುಕ್ರವಾರ ಮತ್ತು ಮಂಗಳವಾರದ ದಿವಸ ಯಾವುದೇ ರೀತಿಯ ವಾಹನಗಳು, ಎತ್ತಿನ ಬಂಡಿ, ಬೀಸುವ ಕಲ್ಲು ಮುಂತಾದ ಯಾವುದೇ ರೀತಿಯ ಚಕ್ರಗಳನ್ನು ಓಡಿಸುವಂತಿಲ್ಲ. ಹಾಗೂ ಮನೆಯಲ್ಲಿ ರೊಟ್ಟಿ ಸಹ ಮಾಡುವಂತಿಲ್ಲ. ಜೊತೆಗೆ ಗ್ರಾಮದ ಯಾರೊಬ್ಬರೂ ಪಾದರಕ್ಷೆಗಳನ್ನು ಧರಿಸದೆ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಬೇಕೆಂದು ತೀರ್ಮಾನಿಸಿ ಅದರಂತೆಯೇ ವಾರದ ಎರಡನೇ ದಿನವಾದ ಇಂದು ಸಹ ಗ್ರಾಮ ದೇವಿಯ ಆರಾಧನೆ ಮಾಡಲಾಯಿತು.
ಕೃಷ್ಣಾ ನದಿಯಿಂದ ಬಿಂದಿಗೆ ನೀರು ತಂದು ಅದರಲ್ಲಿ ಬೇವಿನ ತಪ್ಪಲು ಹಾಕಿ, ಗ್ರಾಮ ದೇವಿಗೆ ಪೂಜೆ ಮಾಡಲಾಯಿತು. ಐದು ವಾರಗಳ ಕಾಲ ಹೀಗೆ ಮಾಡಲಾಗತ್ತೆ. ಕೊನೆಯ ವಾರದಂದು ದೇವಿಗೆ ಸಿಹಿ ಪದಾರ್ಥ ನೈವೇದ್ಯ ಮಾಡಿಸಿ, ತೆಂಗಿನಕಾಯಿ ಒಡೆದು, ವಿಶೇಷ ಪೂಜೆ ನೆರವೇರಿಸಲಾಗುತ್ತೆ. ಕೋವಿಡ್ ವೈರಸ್ ನಿರ್ನಾಮಕ್ಕಾಗಿ ಊರಿನ ಜನರೆಲ್ಲಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.