ಬಾಗಲಕೋಟೆ: ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ದಿಢೀರ್ ವರ್ಗಾವಣೆ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ವರ್ಗಾವಣೆ ನಂತರ ಗಂಗೂಬಾಯಿ ಕೆಎಟಿ ಮೆಟ್ಟಲು ಏರಿರುವುದು ಜಿಲ್ಲೆಯಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.
ಪ್ರಾಮಾಣಿಕ ಅಧಿಕಾರಿ ಹಾಗೂ ಪ್ರವಾಹ ಸಂದರ್ಭದಲ್ಲಿ ಸಾಕಷ್ಟು ಕಾಳಜಿ ವಹಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ಗೆ ಕಳೆದ ದಿನ ಮಧ್ಯಾಹ್ನವೇ ವರ್ಗಾವಣೆ ಆದೇಶ ಬಂದಿದೆ. ಇದರಿಂದ ಜಿಲ್ಲೆಯ ಜನತೆ, ಸಿಬ್ಬಂದಿಗಳು ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕವಾಗಿದ್ದ ಜಿಲ್ಲಾಧಿಕಾರಿ ಎಲ್ಲರ ಜೊತೆಗೆ ಸ್ನೇಹದಿಂದ ಇದ್ದು, ನಗು ನಗುತ್ತಾ ಮಾತನಾಡುತ್ತಾ ಇರುತ್ತಿದ್ದರು. ಯಾರೇ ಬಂದು ತಮ್ಮ ಸಮಸ್ಯೆ ಹೇಳಿಕೊಂಡರೂ ಬಗೆ ಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿಕೊಡುತ್ತಿದ್ದರು ಎಂಬ ಕಾರಣದಿಂದ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು. ಈಗ ದಿಢೀರ್ ವರ್ಗಾವಣೆಗೊಂಡು ಅವರ ಜಾಗದಲ್ಲಿ ಕ್ಯಾಪೆಕ್ಟ್ ರಾಜೇಂದ್ರ ಅವರ ನೇಮಕಗೊಂಡಿದ್ದು, ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ, ಈಗಾಗಲೇ ವರ್ಗಾವಣೆ ಆಗಿದ್ದು, ಇನ್ನು ಸ್ಥಳ ತೋರಿಸಿಲ್ಲ. ಈಗ ಸಿಇಓ ಆಗಿ ವಿಕ್ರಮ್ ಎಂಬುವವರು ನೇಮಕಗೊಂಡು ಅಧಿಕಾರ ಸ್ವೀಕಾರ ಮಾಡಿ, ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ಗಂಗೂಬಾಯಿ ಮಾನಕರ, ಕೆಎಟಿ ಮೆಟ್ಟಲು ಏರಿ ವರ್ಗಾವಣೆ ಆದೇಶ ತಡೆ ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಇದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಲಿದ್ದು, ಬಿಜೆಪಿ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಮಾಡುವ ಕೆಲಸ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.