ಬಾಗಲಕೋಟೆ: ರಾಜ್ಯದಲ್ಲಿ ಸದ್ದಿಲ್ಲದೆ ಪಂಚಮಸಾಲಿ 3ನೇ ಪೀಠ ರಚನೆಗೆ ಸಿದ್ಧತೆ ನಡೆದಿದೆ. ಈ ಬೆನ್ನಲ್ಲೇ ಜಮಖಂಡಿ ಪಟ್ಟಣದಲ್ಲಿ ಪಂಚಮಸಾಲಿ ಸ್ವಾಮೀಜಿಗಳಿಂದ ಒಕ್ಕೂಟ ಸಭೆ ನಡೆದು, ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟೇಬಲ್ ಟ್ರಸ್ಟ್ ನೋಂದಣಿ ಮಾಡಲಾಗಿದೆ.
ಜಮಖಂಡಿ ಪಟ್ಟಣದಲ್ಲಿ 15 ಜನ ಪಂಚಮಸಾಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು.ಪ್ರಮುಖ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಸೇರಿ ಚರ್ಚಿಸಿ ಟ್ರಸ್ಟ್ ಡೀಡ್ ರೂಪಿಸಲಾಯಿತು. ಟ್ರಸ್ಟ್ನ ಅಧ್ಯಕ್ಷರಾಗಿ ಬಬಲೇಶ್ವರದ ಡಾ.ಮಹಾದೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷರಾಗಿ ಬೆಂಡವಾಡದ ಸ್ವಾಮೀಜಿ, ಕಾರ್ಯದರ್ಶಿಗಳಾಗಿ ಮನಗೂಳಿಯ ಹಿರೇಮಠದ ಸಂಗನಬಸವ ಸ್ವಾಮೀಜಿಯವರನ್ನು ನೇಮಕ ಮಾಡಲಾಗಿದೆ. ಈ ಟ್ರಸ್ಟ್ ರಾಜ್ಯವ್ಯಾಪಿ ಕಾರ್ಯ ವಿಸ್ತರಣೆ ಹೊಂದಿದೆ. ಟ್ರಸ್ಟ್ ಮೂಲಕ ಪಂಚಮಸಾಲಿ ಸಮಾಜದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲು ಸ್ವಾಮೀಜಿಗಳು ನಿರ್ಧಾರ ಮಾಡಿದರು. ಜಮಖಂಡಿಯ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ 15 ಸ್ವಾಮೀಜಿಗಳ ಸಮ್ಮುಖದಲ್ಲಿ ಒಕ್ಕೂಟ ರಿಜಿಸ್ಟ್ರಾರ್ ಮಾಡಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಮನಗೂಳಿಯ ಸಂಗನಬಸವ ಸ್ವಾಮೀಜಿ, ರಾಜ್ಯದಲ್ಲಿ 3ನೇ ಪೀಠ ಅಸ್ತಿತ್ವಕ್ಕೆ ಬಂದರೆ ತಪ್ಪೇನು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ರು. ಭಕ್ತರು ಬಯಸಿದರೆ 3ನೇ ಪೀಠ ರಚನೆ ಎಂಬ ಮಾತಿಗೆ ಈಗಲೂ ಬದ್ಧ ಎಂದೂ ಅವರು ತಿಳಿಸಿದ್ರು.ಈಗಿನ ಒಕ್ಕೂಟ ರಚನೆ ಉದ್ದೇಶ ಸಮಾಜದಲ್ಲಿ ಲಿಂಗದೀಕ್ಷೆ ಸೇರಿದಂತೆ ಒಳ್ಳೆಯ ಆಚಾರ ವಿಚಾರ ಕಲಿಸುವ ಉದ್ಧೇಶವಿದೆ.3ನೇ ಪೀಠ ಸ್ಥಾಪನೆಯಾಗುವುದಾದರೆ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕಲಬುರಗಿ ಹೆಚ್ಚು ಜನ ಇದ್ದಾರೆ, ಅವರು ಬಯಸಿದಲ್ಲಿ ರಚನೆಗೆ ಆಗುತ್ತೆ ಎಂದು ಸಭೆ ಬಳಿಕ ಮನಗೂಳಿ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ:'ನಾನು ಜಯಲಲಿತಾ ಪುತ್ರಿ, ಮೈಸೂರಿನಲ್ಲಿ ಹುಟ್ಟಿದ್ದು, ಸಾಬೀತುಪಡಿಸುತ್ತೇನೆ'