ಬಾಗಲಕೋಟೆ: ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ ವ್ಯಕ್ತಪಡಿಸಿದ್ದು, ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಪ್ರಾಧಿಕಾರ ಸದಸ್ಯರಾದ ಮಹಾಂತೇಶ ಹಟ್ಟಿ, ಈ ಹಿಂದೆ ಸಚಿವೆ ನಿರ್ಮಿಲಾ ಸೀತಾರಾಮನ್ ಅವರು ದೇಶದ 13 ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯುವಂತೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಏಕಾಏಕೀ ಹಿಂದಿ, ಇಂಗ್ಲಿಷ್, ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು ಎಂದು ತಿಳಿಸುತ್ತಿರುವದು ಖಂಡನೀಯವಾಗಿದೆ. ಈ ಬಗ್ಗೆ ಸೋಮವಾರ ಬೆಂಗಳೂರಿನಲ್ಲಿ ಚಿಂತನಕರು, ಕನ್ನಡಾಭಿಮಾನಿಗಳು, ಸಾಹಿತಿಗಳು ಸೇರಿಕೊಂಡು ಚರ್ಚೆ ನಡೆಸಿ ನಿಯೋಗ ಮಾಡಿಕೊಂಡು ಸಚಿವರನ್ನು ಭೇಟಿ ಮಾಡಲಾಗುವದು, ನಂತರ ಹೋರಾಟ ಮಾಡಲಾಗುವದು ಎಂದು ತಿಳಿಸಿದರು.
ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷರಾದ ರಮೇಶ ಬದನ್ನೂರು ಮಾತನಾಡಿ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಿ ಭಾಷೆಗೆ ಮಾನ್ಯತೆ ನೀಡಬೇಕು. ಎಲ್ಲಾ ಇಲಾಖೆಯಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡುವುದರ ಜೊತೆಗೆ ಬ್ಯಾಂಕ್ನಲ್ಲಿ ಕರ್ನಾಟಕ ರಾಜ್ಯದಲ್ಲಿ ಕನ್ನಡದವರಿಗೆ ಮಾತ್ರ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.