ಬಾಗಲಕೋಟೆ: ಸಕ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಸೂಪರ್ 7 ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರುಪಮಾ ಎಂಟರ್ ಪ್ರೈಸಸ್ ತಂಡ ಬಾಗಲಕೋಟೆ ಬ್ಲ್ಯೂ ಬಾಯ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟಾಸ್ ಗೆದ್ದ ನಿರುಪಮಾ ಎಂಟರ್ ಪ್ರೈಸಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಇಳಿದ ಬ್ಲ್ಯೂ ಬಾಯ್ಸ್ ನಿಗದಿತ 6 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 66 ರನ್ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ನಿರುಪಮಾ ಎಂಟರ್ ಪ್ರೈಸಸ್ ತಂಡದ ಆಟಗಾರರು, ಕೇವಲ ಒಂದು ವಿಕೆಟ್ ಕಳೆದುಕೊಂಡು 5.3 ಓವರ್ಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ತಂಡವಾಗಿ ನಿರುಪಮಾ ಎಂಟರ್ ಪ್ರೈಸಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಿರುಪಮಾ ಎಂಟರ್ ಪ್ರೈಸಸ್ ತಂಡದ ನಾಗರಾಜ್ 19 ಎಸೆತಗಳಲ್ಲಿ ಅಮೋಘ 54 ರನ್ಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೊತೆಗೆ 1 ಓವರ್ ಬೌಲಿಂಗ್ ಮಾಡಿ, ಒಂದು ವಿಕೆಟ್ ತೆಗೆಯುವ ಮೂಲಕ ಮಿಂಚಿದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಗರಾಜ್ಗೆ ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ಒಂದು ಓವರ್ ಮಾಡಿ ಕೇವಲ 8 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತ ರಮೇಶ್ ಜಾಧವ್ ಅವರಿಗೆ ಉತ್ತಮ ಬೌಲರ್ ಪ್ರಶಸ್ತಿ ಲಭಿಸಿತು.
ಸಕ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ನ ಸದಸ್ಯರಾದ ಇಸ್ಮಾಯಿಲ್ ಸೊಲ್ಲಾಪುರ, ಸಂಗಮೇಶ ಕೊಮಾರ್, ರಾಜು ಬಂಡಿ, ಮುತ್ತು ಅರಗಿಣಶೆಟ್ಟರ್ ಇತರರು ಪಂದ್ಯಾವಳಿಯ ನೇತೃತ್ವ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಬಾಗಲಕೋಟೆ ನಗರಸಭೆ ಸದಸ್ಯೆ ಶಿವಲೀಲಾ ಪಟ್ಟಣಶೆಟ್ಟಿ, ರಾಂಪೂರ ಜಿಲ್ಲಾ ಪಂಚಾಯತ್ ಸದಸ್ಯೆ ಹನಮವ್ವ ಕರಿಹೊಳ್ಳಿ ಹಾಗೂ ಬಾಗಲಕೋಟೆ ತಾಲೂಕು ಪಂಚಾಯತ್ ಸದಸ್ಯ ಪರಶುರಾಮ್ ಛಬ್ಬಿ ಹಾಗೂ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.