ಬಾಗಲಕೋಟೆ:ನರೇಂದ್ರ ಮೋದಿ ಸರ್ಕಾರ ರೈತರ ಕಲ್ಯಾಣಕ್ಕೆ ಕೆಲಸ ಮಾಡಲು ಬದ್ಧವಾಗಿದ್ದು, ನೂತನ ಕೃಷಿ ಕಾಯ್ದೆಗಳು ರೈತರ ಆದಾಯ ಹೆಚ್ಚಿಸಲು ಸಹಾಯಕವಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿ ಇರುವ ಸಚಿವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ಮೋದಿ ಸರ್ಕಾರ ನೇರವಾಗಿ ಹಣ ಜಮೆ ಮಾಡುತ್ತಿದೆ. ಕಾಂಗ್ರೆಸ್ ಸಮಯದಲ್ಲಿ ರೈತರಿಗಾಗಿ 6 ಲಕ್ಷ ಕೋಟಿ ಹಣ ನೀಡಲಾಗುತ್ತಿತ್ತು. ಮೋದಿ ಸರ್ಕಾರ 10 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ರೈತರ ಅಭಿವೃದ್ದಿಗೆ ಶ್ರಮಿಸುತ್ತಿದೆ. ಆರ್ಟಿಕಲ್ 371 ತೆಗೆಯುವ ಧೈರ್ಯ ಯಾರೂ ಮಾಡಿರಲಿಲ್ಲ. ಆದರೆ ನಮ್ಮ ಸರ್ಕಾರ ಅದನ್ನು ಸಾಧಿಸಿದ್ದು, ಕಾಶ್ಮೀರ ಯಾವತ್ತೂ ನಮ್ಮದೇ ಎಂದರು.
ನಿರಾಣಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಾಹಸಕ್ಕೆ ಕೈ ಹಾಕಿದೆ. 45 ಸಾವಿರ ಟನ್ ಕಬ್ಬು ನುರಿಯುವ ಕಾರ್ಖಾನೆ ಇದಾಗಿದ್ದು, ದೇಶದ ದೊಡ್ಡ ಕಾರ್ಖಾನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ಜನ ಹಾಗೂ ರೈತರು ಕೃಷಿಯನ್ನು ಅವಲಂಬಿಸಿದ್ದು, ಈ ಕಾರ್ಖಾನೆ ಇಲ್ಲಿನ ರೈತರಿಗೆ ಅನುಕೂಲವಾಗಲಿದ್ದು, ಇದಕ್ಕಾಗಿ ನಾನು ನಿರಾಣಿಯವರನ್ನು ಅಭಿನಂದಿಸುತ್ತೇನೆ. ಹಿಂದಿನ ಸರ್ಕಾರಗಳು ಕೇವಲ 21 ಸಾವಿರ ಕೋಟಿ ರೂ. ನೀಡಲಾಗುತ್ತಿದ್ದ ಕೃಷಿ ಬಜೆಟ್ನ್ನು ನಮ್ಮ ಸರ್ಕಾರ 2020 ರಲ್ಲಿ 1.34 ಲಕ್ಷ ಕೋಟಿ ರೂ. ಗಳಿಗೆ ಹೆಚ್ಚಿಸಿದ್ದಲ್ಲದೆ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 1.13 ಲಕ್ಷ ಕೋಟಿ ರೂ. ಗಳನ್ನು ಜಮೆ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಮಾತ್ರವಲ್ಲ, ಇಡೀ ವಿಶ್ವದ ನೇತೃತ್ವ ವಹಿಸುವ ದಿಸೆಯತ್ತ ಸಾಗುತ್ತಿದ್ದಾರೆ. ಇದರಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಮಹತ್ವದ್ದಾಗಿದೆ. ದೇಶದಲ್ಲಿ ಜರುಗುತ್ತಿರುವ ಎಲ್ಲ ಹಂತಗಳ ಚುನಾವಣೆಗಳಲ್ಲಿ ದೇಶದ ಜನತೆ ನಮಗೆ ಬೆಂಬಲ ವ್ಯಕ್ತಪಡಿಸುತ್ತ ನಮ್ಮ ಸರ್ಕಾರವನ್ನು ಬಲಪಡಿಸುತ್ತಿದ್ದಾರೆ. ದೇಶವನ್ನು ನಮ್ಮ ಸರ್ಕಾರ ಆತ್ಮನಿರ್ಭರಗೊಳಿಸುವತ್ತ ಸಾಗಿದೆ. ದೇಶದಲ್ಲಿ ಪೆಟ್ರೋಲ್ ಆಮದಿಗಾಗಿ ಸರ್ಕಾರದ ಬಹಳಷ್ಟು ಆದಾಯ ವಿದೇಶಿ ವಿನಿಮಯಕ್ಕೆ ಖರ್ಚಾಗುತ್ತಿದೆ. ಕಬ್ಬು ಬೆಳೆಯ ಸಹ ಉತ್ಪನ್ನವಾಗಿರುವ ಇಥೆನಾಲ್ ಇದೀಗ ದೇಶದ ಇಂಧನ ಕ್ಷೇತ್ರದಲ್ಲಿ ಪೆಟ್ರೋಲ್‍ಗೆ ಪರ್ಯಾಯ ಇಂಧನವಾಗಿ ಬಳಸಲಾಗುತ್ತಿದ್ದು, ದೇಶದ ಅಗತ್ಯತೆಯನ್ನು ಪೂರೈಸಲು ಸಹಕಾರಿಯಾಗಿದೆ ಎಂದರು.