ಬಾಗಲಕೋಟೆ : ಎರಡು ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಿಂದ ರಾಜ್ಯ ಹಾಗೂ ದೇಶವನ್ನು ಹಾಳು ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇವತ್ತು ಇಂತಹ ಸರ್ಕಾರ ಬರಲಿಕ್ಕೆ ಯಾರ್ಯಾರು ಕಾರಣಿಕರ್ತರಿದ್ದಾರೆ. ಅವರವರ ಆತ್ಮಕ್ಕೆ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು ಎಂದು ತಿಳಿಸಿದರು. ಇವತ್ತು ಬಿಜೆಪಿ, ಕಾಂಗ್ರೆಸ್ ಪರಸ್ಪರ ಹೇಳಿಕೆ ಕೊಡ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಪರಿಸ್ಥಿತಿ ಏನಾಗಿದೆ ಎಂಬ ಕಾಳಜಿ ಸಹ ಇಲ್ಲ ಎಂದು ಹರಿಹಾಯ್ದರು.
ಬಹುಶಃ ಹುನಗುಂದದಲ್ಲಿ ಮೂರು ದಿನಗಳ ಹಿಂದೆ, 28 ವರ್ಷದ ಒಬ್ಬ ಯುವಕ ರೈತ ಬೆಳೆ ಬೆಳೆದು ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ರೀತಿಯ ಘಟನೆಯ ಬಗ್ಗೆ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಚಿಂತನೆ ಇಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ಈಗಾಗಲೇ ಮತ್ತೆ ಆರಂಭವಾಗಿವೆ. ಆ ರೈತರ ಕುಟುಂಬಗಳ ಯಾವ ರೀತಿ ಉಳಿಸಬೇಕು ಅನ್ನೋದನ್ನ, ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಆ ಕಡೆ ಜ್ಞಾನ ಇಲ್ಲ ಎಂದು ಆರೋಪಿಸಿದರು.
ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ: ಇದೇ ಸಮಯದಲ್ಲಿ ಮಾತನಾಡಿ, ಕಾಂಗ್ರೆಸ್ ಇದ್ದಾಗ ಏನು ಭ್ರಷ್ಟಾಚಾರ ಇರಲಿಲ್ಲವಾ? ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ಇವತ್ತು ಜನರ ಬದುಕಿನ ಮಧ್ಯೆ ಏನು ಸಮಸ್ಯೆ ಇದೆ. ಅದನ್ನ ಅವರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ. ಬಹುಶಃ ಒಂದು ಪ್ರಮುಖ ದಿನ ಪತ್ರಿಕೆಯಲ್ಲಿ ಯಾವುದೋ ಸರ್ವೇ ರಿಪೋರ್ಟ್ ಕೊಟ್ಟಿದ್ದಾರೆ. ಭಾರತ ದೇಶ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಬಡ ಜನರು ಇರುವಂತಹ ರಾಷ್ಟ್ರ ಅಂತ ವರದಿ ಕೊಟ್ಟಿದ್ದಾರೆ. ನಮ್ಮ ದೇಶದ ಸಂಪತ್ತು, ಕೇವಲ 166 ಜನರ ಕೈನಲ್ಲಿದೆ. ಅದು ಕೋವಿಡ್ಕ್ಕಿಂತ ಮುಂಚೆ 106 ಜನ ಇದ್ದರು. ಈಗ ಅವರ ಸಂಖ್ಯೆ 166 ಕ್ಕೆ ಹೋಗಿದೆ ಎಂದ ಹೆಚ್‌ಡಿಕೆ, ಇವತ್ತು ಕೆಲವು ಶ್ರೀಮಂತರು ಏನಿದ್ದಾರೆ. ಅವರ ಆದಾಯ ಆ ಸಂಖ್ಯೆ ಏನಿದೆ. ದಿನಕ್ಕೆ ಮೂರು ಸಾವಿರ ಕೋಟಿ ಆದಾಯ ಇದೆ ಅಂತ ಹೇಳ್ತಾರೆ. ಆದ್ರೆ ಬಡತನ ಅನ್ನುವಂತದ್ದು ಇವತ್ತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ ಎಂದರು.
ಪಂಚರತ್ನ ಕಾರ್ಯಕ್ರಮದ ಮೂಲ ಉದ್ದೇಶ: ವಿಶ್ವದಲ್ಲೇ ಭಾರತ ದೇಶ ಬಡವರ ರಾಷ್ಟ್ರ, ಬಡತನ ಇರುವರ ಸಂಖ್ಯೆ ದೊಡ್ಡದು ಅನ್ನುವ ವರದಿ ಬಂದಿದೆ. ಅದರ ಬಗ್ಗೆ ಒಂದು ಎಡಿಟೋರಿಯಲ್ ಏನಿದೆ. ಇವತ್ತು ನಾವು ಅದರ ಬಗ್ಗೆ ಚಿಂತನೆ ಮಾಡಬೇಕಿದೆ. ಪ್ರತಿ ಬಡವರ ಕುಟುಂಬದ ಆದಾಯವನ್ನ ಯಾವ ರೀತಿ ಹೆಚ್ಚಿಸಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಅದೇ ನಮ್ಮ ಪಂಚರತ್ನ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ & ಬಿಜೆಪಿ ನಾಯಕರು ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಆದರೆ, ಅವರು ನೀಡುತ್ತಿರುವ ಕಾರ್ಯಕ್ರಮಗಳು ಏನಿವೆಯೋ ಅದರಿಂದ ನಮ್ಮ ನಾಡಿನ ಜನತೆಯ ಬದುಕಿಗೆ, ಯಾವುದೇ ರೀತಿಯ ಉಪಯೋಗವಾಗಿಲ್ಲ ಎಂದು ಟಾಂಗ್ ನೀಡಿದರು. ನಂತರ ಗುಳೇದಗುಡ್ಡ ಪಟ್ಟಣದ ಹರದೋಳ್ಳಿ ಪ್ರದೇಶದ ಮಾರುತೇಶ್ವರ ದೇವಾಲಯಕ್ಕೆ ಆಗಮಿಸಿದ ಹೆಚ್‌ಡಿಕೆ ಪೂಜೆ ಸಲ್ಲಿಸಿದರು. ಬಳಿಕ ಸಾವಿರಾರು ಸಂಖ್ಯೆ ಜನಸ್ತೋಮ ಮಧ್ಯೆ, ಕುಂಭಮೇಳದ ಮೂಲಕ ಪಂಚರತ್ನ ರಥ ಯಾತ್ರೆ ಪ್ರಾರಂಭಿಸಿದರು.
ಸಿ ಎಂ ಇಬ್ರಾಹಿಂ ಸೇರಿದಂತೆ ಇತರ ಗಣ್ಯರ ಮೂಲಕ ಯಾತ್ರೆ: ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಮಹಿಳೆಯರು ಕುಂಭ ಮೇಳ ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು. ಗುಳೇದಗುಡ್ಡ ಪಟ್ಟಣದ ಪ್ರಮುಖ ರಸ್ತೆ ಮೂಲಕ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ಜೆಡಿಎಸ್ ಮುಖಂಡರಾದ ಹನುಮಂತ ಮಾವಿನಮರದ ಹಾಗೂ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ ಸೇರಿದಂತೆ ಇತರ ಗಣ್ಯರು ಮೂಲಕ ಯಾತ್ರೆ ಪ್ರಾರಂಭಿಸಲಾಯಿತು.
ಇದೇ ಸಮಯದಲ್ಲಿ ಭಂಡಾರಿ ಕಾಲೇಜ್ ವೃತ್ತದ ಬಳಿ ನೇಕಾರರ ಕಣದಿಂದ ಮಾಡಿದ ಬೃಹತ್ ಮಾಲೆಯನ್ನು ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ಪುರಸಭೆ ಮುಂದೆ ಸಾರ್ವಜನಿಕ ಭಾಷಣ ಮಾಡಿದ ಕುಮಾರಸ್ವಾಮಿ ಅವರು, ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. ಬಳಿಕ ಕೆರೂರು ಪಟ್ಟಣಕ್ಕೆ ತೆರಳಿದರು.
ಓದಿ : ಆಪರೇಷನ್ ಕಮಲವೆಂಬ ಕೊಳಕು ರಾಜಕೀಯಕ್ಕೆ 'ಸಿದ್ದಪುರುಷ'ರು ಸಿದ್ದರಾಮಯ್ಯ: ಹೆಚ್‌ಡಿಕೆ