ಬಾಗಲಕೋಟೆ : 60 ವರ್ಷದ ಇತಿಹಾಸದಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನಪ್ಪಾ ಅಂದ್ರೆ ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಬಡತನ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ದೇಶಕ್ಕೆ ನಾಲ್ಕು ಕೊಡುಗೆ ಕೊಟ್ಟಿದೆ : ನಗರದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಮಟ್ಟದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ನಾಲ್ಕು ಕೊಡುಗೆ ಕೊಟ್ಟಿದೆ.
ಮೊದಲನೆಯದು ಭ್ರಷ್ಟಾಚಾರ, ಎರಡನೇಯದು ಭಯೋತ್ಪಾದನೆ, ಮೂರನೇಯದು ನಿರುದ್ಯೋಗ ಹಾಗೂ ನಾಲ್ಕನೆಯದು ಬಡತನ. ಆದ್ರೆ, ಈ ನಾಲ್ಕನ್ನೂ ಮುಕ್ತ ಮಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಕಟೀಲ್ ಹೇಳಿದರು.
ಗುಂಡಿನಿಂದ ಬಾಂಬ್ಗೆ ಪ್ರಮೋಷನ್ : ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದನೆ ಹೇಗಿತ್ತು ಅಂತಾ ಸಣ್ಣ ವಿವರಣೆ ಕೊಡ್ತೇನೆ. ನೆಹರೂ ಕಾಲದಲ್ಲಿ ಒಂದು ಗುಂಡಿನಿಂದ ಗೋಡ್ಸೆ ಕೊಂದ್ರು. ಇಂದಿರಾಗಾಂಧಿ ಕಾಲದಲ್ಲಿ 17 ಗುಂಡಿನಿಂದ ಇಂದಿರಾಗಾಂಧಿಯನ್ನ ಕೊಂದರು. ರಾಜೀವ್ ಗಾಂಧಿ ಕಾಲದಲ್ಲಿ ಬಾಂಬ್ ಸ್ಪೋಟ ಆಯ್ತು.
ಹೀಗಾಗಿ, ಒಂದು ಗುಂಡಿನಿಂದ 17 ಗುಂಡಿಗೆ ಪ್ರಮೋಷನ್, 17 ಗುಂಡಿನಿಂದ ಬಾಂಬ್ಗೆ ಪ್ರಮೋಷನ್. ಇದು ಕಾಂಗ್ರೆಸ್ನ ಆಡಳಿತ ಎಂದು ವ್ಯಂಗ್ಯವಾಡಿದರು. ಅಲ್ಲದೆ, ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಭಯೋತ್ಪಾದನೆ ಇಲ್ಲ. ಭಯೋತ್ಪಾದನೆ, ನಕ್ಸಲರ ಮುಕ್ತ ಸರ್ಕಾರ ಅಂದ್ರೆ ಅದು ನರೇಂದ್ರ ಮೋದಿ ಸರ್ಕಾರ ಎಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಸಂಘಟನೆ : ಇದೇ ಸಂದರ್ಭದಲ್ಲಿ, ರಾಷ್ಟ್ರೀಯ ಮಹಿಳಾ ಮೊರ್ಚಾ ಅಧ್ಯಕ್ಷೆ ವಾನಂತಿ ಶ್ರೀನಿವಾಸ ಮಾತನಾಡಿ, ಮುಂದಿನ ದಿನಮಾನದಲ್ಲಿ ವಿಧಾನಸಭಾ ಸೇರಿದಂತೆ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧರಾಗಬೇಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪ್ರತಿಶತ 50ರಷ್ಟು ಮೀಸಲಾತಿ ಇದೆ. ಇದರ ಉಪಯೋಗ ಪಡೆದುಕೊಳ್ಳಲು, ಗ್ರಾಮ ಮಟ್ಟದಲ್ಲಿ ಸಂಘಟನೆ ಅಗತ್ಯವಿದೆ ಎಂದರು.