ಬಾಗಲಕೋಟೆ: ಮಹಾಮಾರಿ ಕೊರೊನಾದಿಂದ ನಿತ್ಯ ಮೃತರ ಸಂಖ್ಯೆ ಹೆಚ್ಚಾಗುತ್ತಿದ್ದು ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ, ಮುಸ್ಲಿಂ ಯುವಕರೇ ಜಾತ್ಯತೀತ ಭಾವನೆಯಿಂದ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಜಿಲ್ಲೆಯ ರಬಕವಿ - ಬನಹಟ್ಟಿ ಅಂಜುಮನ್ ಕಮಿಟಿಯ ಮುಖಂಡರ ಚಿಂತನೆ ಮೂಲಕ ಯುವಕರ ತಂಡ ರಚನೆ ಮಾಡಿ, ಅಂತ್ಯಸಂಸ್ಕಾರದ ಮಾಡಲು ಸಜ್ಜಾಗಿದ್ದಾರೆ. ಯಾವುದೇ ಜಾತಿ ಭೇದ ನೋಡದೆ, ಅವರ ಪದ್ದತಿಯ ಅನುಸಾರ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಕೊರೊನಾ ತಗುಲಿ ಮೃತಪಟ್ಟ ವ್ಯಕ್ತಿಯನ್ನು ಮುಟ್ಟೋಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಮೃತ ವ್ಯಕ್ತಿಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವುದರ ಮುಖಾಂತರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕೊರೊನಾದಿಂದ ಮೃತ ಪಟ್ಟವರ ಅಂತ್ಯ ಸಂಸ್ಕಾರ ಮಾಡುವಾಗ ಬೀಸಾಡುವುದನ್ನು ನೋಡಿ, ಈ ರೀತಿ ಆಗಬಾರದು ಎಂಬ ಉದ್ದೇಶದಿಂದ ಅಂಜುಮನ್ ಕಮಿಟಿಯ ಮೌಲಾನಾ ಅವರ ಮಾತಿನಂತೆ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ. ಇಡೀ ತಾಲೂಕಿನಲ್ಲಿ ಎಲ್ಲೇ ಸಾವಾದರೂ ಹೋಗಿ ಯಾವುದೇ ಫಲಾಪೇಕ್ಷ ಇಲ್ಲದೇ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಯುವಕರಿಗೆ ಸನ್ಮಾನ: ರಬಕವಿ ಮುಸ್ಲಿಂ ಯುವಕರಾದ ಅಸ್ಲಾಂ ಕಿಲ್ಲೇದಾರ, ಅಬೂಬಕ್ಕರ್ ಬಂಡೇಬುರುಜ, ಇಸ್ಮೈಲ್ ನಮಾಜಕಟ್ಟಿ, ಮೋಸಿನ ಗೋಕಾಕ್, ಆಸೀಫ್ ಗೋಕಾಕ್, ಮೋಸಿನ ಅತ್ತಾರ, ಯಾಸೀನ ಅತ್ತರ, ಜಮೀಲ್ ಪನಿ ಬಂದ, ವಾಜಿದ್ ಲೇಂಗ್ರೆ, ಸೇರಿದಂತೆ ಮುಂತಾದ ಯುವಕರು ಸೇರಿ ಇಂತಹ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಈ ಯುವಕರನ್ನು ಕರೆದು ಡಾ.ಪದ್ಮಜೀತ ನಾಡಗೌಡ ಪಾಟೀಲ್ ಅವರು ಸನ್ಮಾನ ಮಾಡಿ ಗೌರವಿಸಿದ್ದಾರೆ.