ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆ ತಾಯಿ ಹಾಗೂ ಮಗನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ಜಂಗವಾಡ ಗ್ರಾಮದ ಬಳಿಯ ಹೊಲದಲ್ಲಿ ನಡೆದಿದೆ.
ದುರ್ಗಪ್ಪ ಭೀಮಪ್ಪ ಮಾದರ (36) ಮತ್ತು ದೇವಕೆವ್ವ ಭೀಮಪ್ಪ ಮಾದರ (56) ಕೊಲೆಯಾದ ತಾಯಿ-ಮಗ. ಜಮೀನು ವಿಚಾರವಾಗಿ ಕೊಲೆಯಾದ ದುರ್ಗಪ್ಪ ಮಾದರ ಮತ್ತು ಉಮೇಶ್ ಮಾದರ ಕುಟುಂಬದ ನಡುವೆ ಜಗಳ ನಡೆಯುತ್ತಿತ್ತು. ಕಲಹ ಕೋರ್ಟ್ ಮೆಟ್ಟಿಲೇರಿ, ಜಮೀನು ಕೊಲೆಯಾದ ದುರ್ಗಪ್ಪ ಮಾದರ ಅವರಿಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದರಿಂದ ಕೋಪಗೊಂಡ ಉಮೇಶ್ ಮಾದರ ಹಾಗೂ ಕುಟುಂಬಸ್ಥರು, ದುರ್ಗಪ್ಪ ಮಾದರ ಮತ್ತು ತಾಯಿ ದೇವಕ್ಕೆವ್ವ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಘಟನೆ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳಾದ ಶಿವಪ್ಪ ಮಾದರ, ಉಮೇಶ್ ಮಾದರ, ಕಾಮಪ್ಪ ಮಾದರ, ಹನುಮಂತ ಮಾದರ, ಪ್ರಕಾಶ್ ಮಾದರ, ರವಿ ಮಾದರ, ರಮೇಶ್ ಮಾದರ, ಬಸವರಾಜ ಮಾದರ ಎಂಬುವರಿಗಾಗಿ ಬಲೆ ಬೀಸಿದ್ದಾರೆ.