ಬಾಗಲಕೋಟೆ: ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ ನಡೆದಿದೆ. ಕಮತಗಿ ಗ್ರಾಮದ ಬಳಿರುವ ಮಲಪ್ರಭಾ ನದಿಯ ಬಳಿ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳ ಶವ ಪತ್ತೆಯಾಗಿದೆ. ಮೃತರು ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಸಂಗಮ್ಮ ಸುರೇಶ ಮಾಸರೆಡ್ಡಿ (45), ಐಶ್ವರ್ಯ (23) ಸೌಂದರ್ಯ (19) ಎಂದು ಗುರುತಿಸಲಾಗಿದೆ.
ತಾಯಿ ಮತ್ತು ಹೆಣ್ಮಕ್ಕಳಿಬ್ಬರು ಆತ್ಮಹತ್ಯೆ: ಸೂಳೇಭಾವಿ ಗ್ರಾಮದ ಸಂಗಮ್ಮ ಮತ್ತು ಸುರೇಶ ಮಾಸರೆಡ್ಡಿ ದಂಪತಿಗೆ ಮದುವೆಯಾಗಿ ಸುಮಾರು ವರ್ಷಗಳೇ ಕಳೆದಿವೆ. ಈ ದಂಪತಿಗೆ ಇಬ್ಬರು ಮದುವೆ ವಯಸ್ಸಿಗೆ ಬಂದಿರುವ ಹೆಣ್ಣಮಕ್ಕಳಿದ್ದರು. ಆದರೆ ಮನೆಯ ಯಜಮಾನ ಸುರೇಶ್ ಕುಡಿದು ಬಂದು ಪ್ರತಿ ನಿತ್ಯ ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದರಿಂದ ತಾಯಿ ಮತ್ತು ಮಕ್ಕಳಿಬ್ಬರು ಬೇಸತ್ತು ಹೋಗಿದ್ದರು. ಇಂದು ಸಹ ಸುರೇಶ್ ಕುಟುಂಬಸ್ಥರೊಡನೆ ಜಗಳವಾಡಿದ್ದಾನೆ. ಇದರಿಂದ ಮನನೊಂದ ತಾಯಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈ ಕಾರಣಕ್ಕೆ ಅವರು ಕತ್ತಲು ಆಗುತ್ತಿದ್ದಂತೆ ಮಲಪ್ರಭಾ ನದಿಯ ಬಳಿ ತೆರಳಿದ್ದಾರೆ. ಇತ್ತ ಇವರು ಮನೆ ಬಳಿ ಕಾಣದ ಹಿನ್ನೆಲೆ ಸಂಬಂಧಿಕರು ಅನುಮಾನಗೊಂಡು ಹುಡುಕಾಟ ಆರಂಭಿಸಿದ್ದರು. ಇವರನ್ನು ನೋಡಿದ ಕೆಲವರು ಮಲಪ್ರಭಾ ನದಿ ಬಳಿ ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ನದಿ ಸೇತುವೆ ಮೇಲೆ ಹಾದು ಹೋಗುವವರು ಸಹ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದರು. ಅಷ್ಟೋತ್ತಿಗಾಗಲೇ ಸಂಬಂಧಿಕರು ಸಹ ನದಿ ಬಳಿ ಆಗಮಿಸಿದ್ದರು. ಇನ್ನು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಮೀನುಗಾರರು ಸತತ ಎರಡ್ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಮೂರು ಮೃದದೇಹಗಳನ್ನ ನದಿಯಿಂದ ಹೊರ ತೆಗೆದರು. ಈ ವೇಳೆ ಮೃತ ದೇಹಗಳನ್ನು ನೋಡಿದ ಸಂಬಂಧಿಕರ ಆಕ್ರಂದ ಮುಗಿಲು ಮುಟ್ಟಿತ್ತು.
ಪೊಲೀಸರ ವಶದಲ್ಲಿ ಆರೋಪಿ ಸುರೇಶ್: ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಇನ್ನು ಈ ಮೂವರು ಸಾವಿಗೆ ಕಾರಣರಾಗಿರುವ ಸುರೇಶ್ನನ್ನು ಅಮೀನಗಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಅಮೀನಗಡ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೂವರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ಕಳೆದ ಬುಧವಾರ ತಾಯಿಯೊಬ್ಬಳು ಮುದ್ದಾದ ಮೂರು ಮಕ್ಕಳ ಪಾಲಿಗೆ ಯಮಳಾಗಿದ್ದಳು. ಮೂರು ಹೆಣ್ಣು ಮಕ್ಕಳನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ತಿಮ್ಮಾಪುರ ಗ್ರಾಮದಲ್ಲಿ ನಡೆದಿತ್ತು. ಮೃತಪಟ್ಟವರನ್ನು ತಾಯಿ ರೇಖಾ ಬಗಲಿ (28), ಹೆಣ್ಣು ಮಕ್ಕಳಾದ ಸನ್ನಿಧಿ (7), ಸಮೃದ್ದಿ (4) ಮತ್ತು ಶ್ರೀನಿಧಿ (2) ಎಂದು ಗುರುತಿಸಲಾಗಿತ್ತು. ಈ ಘಟನೆ ನಡೆದು ವಾರದೊಳಗೆ ಸೂಳೇಭಾವಿ ಗ್ರಾಮದಲ್ಲಿ ಮತ್ತೊಂದು ಘಟನೆ ಇದೇ ರೀತಿ ನಡೆದಿರುವುದು ಬೆಳಕಿಗೆ ಬಂದಿದೆ.