ಬಾಗಲಕೋಟೆ : ದೇಶಾದ್ಯಂತ ಶನಿವಾರ ಶಿಯಾ ಮುಸ್ಲಿಮರು ಮೊಹರಂ ಆಚರಿಸಿದರು. ರಾಜ್ಯದಲ್ಲೂ ಶ್ರದ್ಧಾ ಭಕ್ತಿಯ ಮೊಹರಂ ನಡೆದಿದೆ. ಬಾಗಲಕೋಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಕ ಮೆರವಣಿಗೆಗಳು ನಡೆದವು. ಮುಸ್ಲಿಮರೊಂದಿಗೆ ಹಿಂದೂಗಳೂ ಭಾಗಿಯಾಗಿದ್ದರು.
ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಮೊಹರಂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಗ್ರಾಮದಲ್ಲಿ ಮುಸ್ಲಿಮರು ಇಲ್ಲ. ಹೀಗಿದ್ದರೂ ಬೇರೆ ಗ್ರಾಮದಿಂದ ಸಮುದಾಯದವರನ್ನು ಕರೆಸಿ ಮೊಹರಂ ಮಾಡಲಾಗುತ್ತದೆ. ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಒಟ್ಟಾಗಿ ಸೇರಿ ಹಬ್ಬ ಆಚರಿಸಿ ಭಾವೈಕ್ಯತೆ ಮೆರೆಯುತ್ತಾರೆ.
ಗ್ರಾಮದಲ್ಲಿ ತಲೆತಲಾಂತರಗಳಿಂದ ಈ ಪದ್ಧತಿ ರೂಢಿಯಲ್ಲಿದೆ. ಪಕ್ಕದ ಕುಲಹಳ್ಳಿ ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಆಗಮಿಸಿ, ಮುಸ್ಲಿಂ ಸಂಪ್ರದಾಯದಂತೆ ಮೊಹರಂ ಆಚರಣೆ ಮಾಡಿದರೆ, ಹಿಂದೂಗಳು ತಮ್ಮ ಪದ್ದತಿಯಂತೆ ಹಬ್ಬ ಆಚರಿಸುವುದನ್ನು ಇಲ್ಲಿ ನೋಡಬಹುದು.
ಮೊಹರಂ ಕೊನೆಯ ದಿನ ಗ್ರಾಮದಲ್ಲಿ ದೇವರನ್ನಿಡಲು ಚಿಕ್ಕ ಪ್ರಾರ್ಥನಾ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡಕ್ಕೆ ಸುಣ್ಣಬಣ್ಣ ಹಚ್ಚಿ ಅಲಂಕಾರ ಮಾಡಲಾಗಿದೆ. ಜನರ ಮೈಮೇಲೆ ದೇವರು ಬರುವುದು, ಹೆಜ್ಜೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯ ಗೋಷ್ಟಿಗಳೊಂದಿಗೆ ಮೆರವಣಿಗೆ ನಡೆಯುತ್ತದೆ. ದೇವರಿಗೆ ವಿಶೇಷ ಪೂಜೆ ಜರುಗುತ್ತದೆ.
ಇದನ್ನೂ ಓದಿ : ಸೌಂದರ್ಯದ ರಾಶಿ ಚಿಕ್ಕಮಗಳೂರು ಚಾರ್ಮಾಡಿ ಘಾಟಿ.. ಕಾಫಿನಾಡಿನ ಕ್ಷೀರಧಾರೆಯ ವಿಡಿಯೋ ನೋಡಿ..