ಬಾಗಲಕೋಟೆ: ಪಂಚಮಸಾಲಿ ಸ್ವಾಮೀಜಿಯವರು ಆತುರದಿಂದ ಪಾದಯಾತ್ರೆ ಬಗ್ಗೆ ನಿರ್ಧಾರ ತೆಗದುಕೊಂಡಿದ್ದಾರೆ. ಶಾಂತಿಯುತವಾಗಿ ಮಾತುಕತೆಯಿಂದ ಮೀಸಲಾತಿ ಸಮಸ್ಯೆ ಬಗೆ ಹರಿಸುವುದು ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಹನುಮಂತ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.
ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮದೇ ಸರ್ಕಾರ ಇತ್ತು. ಶಾಂತಿಯುತವಾಗಿ ಮಾತುಕತೆಯಿಂದ ಸಮಸ್ಯೆ ಬಗೆಹರಿಸುವ ಸಾಧ್ಯತೆ ಇತ್ತು. ಆದರೆ ಆತುರದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಸರ್ಕಾರ ಕಾಲಾವಕಾಶ ಕೇಳಿತ್ತು. ಪಾದಯಾತ್ರೆ ಮುಂಚೆಯೇ ಮಾತುಕತೆ ಮಾಡಿ ನಿಲ್ಲಿಸುವುದು ಸಾಧ್ಯವಿತ್ತು. ಆದರೆ ಈಗ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಈ ಬಗ್ಗೆ ನಮ್ಮ ಹಿರಿಯರು ಚಿಂತನೆ ನಡೆಸುತ್ತಾರೆ ಎಂದು ತಿಳಿಸಿದರು.
ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಅಮಿತ್ ಶಾ ಅಡಿಗಲ್ಲು: ಜನವರಿ 17 ರಂದು ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿರುವ ಕೇದಾರನಾಥ ಸಕ್ಕರೆ ಕಾರ್ಖಾನೆ ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮ ಅಡಿಗಲ್ಲು ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರ ನಳಿನ್ ಕುಮಾರ್ ಕಟೀಲ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಇತರ ಪ್ರಮುಖರು ಆಗಮಿಸಲಿದ್ದಾರೆ. ಈಗಾಗಲೇ ನಾಲ್ಕು ಹೆಲಿಪ್ಯಾಡ್ ಸೇರಿದಂತೆ ಅಗತ್ಯ ಇರುವ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ : ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ