ಬಾಗಲಕೋಟೆ: ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ಬಿಟಿಡಿಎನಿಂದ ನೀಡಿದ ನಿವೇಶನಗಳಲ್ಲಿ ಕೆಲವರು ಪ್ರಾರ್ಥನಾ ಮಂದಿರಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಲಾಗುವುದು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನವನಗರದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, 6 ಸ್ಥಳಗಳಲ್ಲಿ ಪ್ರಾರ್ಥನಾ ಮಂದಿರ ಕಟ್ಟಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಲು ಈಗಾಗಲೇ ಬಿಟಿಡಿಎದಿಂದ ನೋಟಿಸ್ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ತೆರವುಗೊಳಿಸದೇ ಇದ್ದರೆ, ಪ್ರಾಧಿಕಾರದಿಂದ ತೆರವುಗೊಳಿಸಬೇಕಾದೀತು ಎಂದು ಎಚ್ಚರಿಸಿದರು.
ಈಗಾಗಲೇ ನವನಗರದಲ್ಲಿ ಅಧಿಕೃತವಾಗಿ ಧಾರ್ಮಿಕ ಸ್ಥಳಗಳಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಸಂತ್ರಸ್ತರ ನಿವೇಶನಗಳನ್ನು ಪ್ರಾರ್ಥನಾ ಮಂದಿರಗಳನ್ನಾಗಿ ಮಾರ್ಪಾಡು ಮಾಡಿಕೊಂಡಿರುವುದು ಗಮನಕ್ಕೆ ಬಂದ ತಕ್ಷಣ ಅಂತಹವುಗಳನ್ನು ತೆರವುಗೊಳಿಸಲು ನಿಯಮಾವಳಿ ಪ್ರಕಾರ ನೋಟಿಸ್ ನೀಡಲಾಗಿದೆ. ಇಂತಹ ಘಟನೆಗಳು ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ಇಲ್ಲಿಯವರೆಗೂ 1,505 ಸಂತ್ರಸ್ತರಿಗೆ ನಿವೇಶನವನ್ನು ನೀಡಲಾಗಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ 10 ಬಾರಿ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ 288 ಸಂತ್ರಸ್ತರಿಗೆ ನೇರವಾಗಿ ಹಕ್ಕುಪತ್ರಗಳನ್ನು ತಲುಪಿಸಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಎಚ್ಚರಿಕೆ: ನೀರಲಕೇರಿ ಮತ್ತು ಸಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅನಧಿಕೃತ ನಿವೇಶನಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಟಿಡಿಎ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಅವರು ಮಾತನಾಡಿದರು. ಬುಡಾ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಟಾ ನಿವೇಶನಗಳನ್ನು ಸಾರ್ವಜನಿಕರು ಖರೀದಿಸಬಾರದು. ಯಾರೋ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ ಖರೀದಿಸಿ ಗುಂಟಾ ಮಾದರಿಯಲ್ಲಿ ಸಾರ್ವಜನಿಕರಿಗೆ ನಿವೇಶನ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆಯನ್ನು ಶೀಘ್ರದಲ್ಲಿಯೇ ಕರೆಯಲಾಗುವುದು. ಗುಂಟಾ ಮಾದರಿಯ ನಿವೇಶನಗಳಿಗೆ ಬುಡಾ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗದೇ ಇರುವುದಕ್ಕೆ ಉತ್ತರಗಳನ್ನು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಕಡಿಮೆ ವೆಚ್ಚದಲ್ಲಿ ನಿವೇಶನಗಳು ಸಿಗುತ್ತವೆ ಎಂದು ಅಗತ್ಯ ಮಾಹಿತಿ ಇಲ್ಲದೆ ಅನಧಿಕೃತ ಜಾಗವನ್ನು ಖರೀದಿಸಲು ಮುಂದಾಗಬಾರದು ಎಂದು ಹೇಳಿದರು.
ಓದಿ: ನೀವು ಜನಪರ ಕೆಲಸ ಮಾಡಿದ್ದೀರಿ, ನಿಮ್ಮ ಜೊತೆಗೊಂದು ಸೆಲ್ಫಿ ಬೇಕು: ರೇಣುಕಾಚಾರ್ಯಗೆ ಬಾಲಕಿ ಮನವಿ