ಬಾಗಲಕೋಟೆ: ವೀರ ಸಾವರ್ಕರ್, ಅಂಬೇಡ್ಕರ್ ತ್ಯಾಗದಿಂದ ಕಾಂಗ್ರೆಸ್ನವರು 50 ವರ್ಷಗಳ ಕಾಲ ಅಧಿಕಾರ ಅನುಭವಿಸಿದ್ದಾರೆ. ಮಾನ ಮರ್ಯಾದೆ ಇದ್ದರೆ ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಬಿಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, ವಿಧಾನಸೌಧ, ಸುವರ್ಣಸೌಧ, ಸಂಸತ್ನಲ್ಲೂ ಸಾವರ್ಕರ್ ಫೋಟೋ ಹಾಕಿದ್ದೀವಿ. ಇಂದಿರಾ ಗಾಂಧಿ ಕೂಡ ಸಾವರ್ಕರ್ ಸ್ಟಾಂಪ್ ಬಿಡುಗಡೆ ಮಾಡಿದ್ದಾರೆ. ಇದನ್ನು ಇಂದಿರಾ ಗಾಂಧಿಯವರೇ ತಮ್ಮ ಪತ್ರದಲ್ಲಿ ಕೋಟ್ ಮಾಡಿದ್ದಾರೆ. ದೇಶದ ಕಠಿಣ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅಂತ ಹೇಳಿದ್ದಾರೆ. ಅದ್ದರಿಂದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜೈಲಿಗೆ ಹೋಗಿ ಬಂದ ಭ್ರಷ್ಟರಿಗೆ ಮಾತಾಡುವ ನೈತಿಕತೆಯಿಲ್ಲ ಎಂದು ಡಿ ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಕರ್ನಾಟಕಕ್ಕೂ ವೀರ ಸಾವರ್ಕರ್ಗೂ ಏನು ಸಂಬಂಧ? ಎಂಬ ಡಿಕೆಶಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಸೋನಿಯಾ ಗಾಂಧಿಗೂ ಭಾರತಕ್ಕೂ ಏನು ಸಂಬಂಧ, ಸೋನಿಯಾ ಗಾಂಧಿ ಯಾವ ದೇಶದವರು?. ಮಹಾರಾಷ್ಟ್ರದೊಳಗೆ ಬಹಳಷ್ಟು ಸತ್ಪುರುಷರು ಹುಟ್ಟಿದ್ದಾರೆ. ಅಂಬೇಡ್ಕರ್ ಮಹಾರಾಷ್ಟ್ರ ದವರು, ವಲ್ಲಭ ಭಾಯಿ ಪಾಟೇಲ್ , ಗಾಂಧೀಜಿ ಗುಜರಾತ್ನವರು. ಯಾರು ಎಲ್ಲಿ ಹುಟ್ಟಿದರು ಅನ್ನೋದು ಮುಖ್ಯವಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಕೋಟ್ಯಂತರ ಜನರ ಬಲಿದಾನವಾಗಿದೆ. ವೀರ ಸಾವರ್ಕರ್ ಇತಿಹಾಸ ಓದಿದವರಿಗೆ ಇದು ಗೊತ್ತಿದೆ ಎಂದು ತಿರುಗೇಟು ನೀಡಿದರು.
ಅಂದು ಕಾಲಾಪಾನಿ ಶಿಕ್ಷೆ ದೇಶದ ಕಠಿಣ ಶಿಕ್ಷೆಯಾಗಿತ್ತು. ಅಂತಹ ಶಿಕ್ಷೆ ಎದುರಿಸಿ ಇಡೀ ಸಾವರ್ಕರ್ ಕುಟುಂಬ ತ್ಯಾಗ ಮಾಡಿದೆ. ವೀರ ಸಾವರ್ಕರ್ ಗಾಣದ ಎತ್ತಿನ ತರಹ ಶಿಕ್ಷೆ ಅನುಭವಿಸಿದ್ದಾರೆ. ಡಿ ಕೆ ಶಿವಕುಮಾರ್, ರಾಹುಲ್ ಗಾಂಧಿ ಅಂತವರು ಒಂದು ತಿಂಗಳು ಆ ಜೈಲಿನಲ್ಲಿ ಇದ್ದು ಬರಲಿ ನೋಡೋಣವೆಂದು ಸವಾಲು ಹಾಕಿದರು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಜೊತೆಗೆ ಬೆಳಗಾವಿ ಕುಕ್ಕರ್ ಮೇಲೂ ಡಿಕೆಶಿಗೆ ಪ್ರೀತಿ : ಯತ್ನಾಳ್ ವ್ಯಂಗ್ಯ