ಬಾಗಲಕೋಟೆ: ಕಾಂಗ್ರೆಸ್ ಪಕ್ಷದವರು ಗಿಳಿ ಭವಿಷ್ಯ ಹೇಳುತ್ತಿದ್ದಾರೆ. ಈ ಗಿಳಿ ಭವಿಷ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಶಾಸಕರು ಕೈ ಸಂಪರ್ಕದಲ್ಲಿದ್ದಾರೆ ಎಂದು ನೀಡಿರುವ ಹೇಳಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯಗೆ ಅವರ ಕಾಂಗ್ರೆಸ್ ಶಾಸಕರನ್ನೇ ಹಿಡಿದುಕೊಳ್ಳಲಾಗುತ್ತಿಲ್ಲ.
17 ಜನ ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಾರೆ. ಚಾಮುಂಡೇಶ್ವರಿಯಲ್ಲೂ ಸೋತರು. ವಿಧಿಯಿಲ್ಲದೇ ಬಾದಾಮಿಗೆ ಬಂದು ನಿಂತು ಗೆದ್ದರು. ಮೊದಲು ಅವರ ಪಕ್ಷದ ಶಾಸಕರನ್ನೇ ಅವರು ಉಳಿಸಿಕೊಳ್ಳೋ ಪ್ರಯತ್ನ ಮಾಡಲಿ. ಒಂದೆಡೆ ಡಿಕೆಶಿ, ಮತ್ತೊಂದೆಡೆ ಸಿದ್ದರಾಮಯ್ಯ. ಹೀಗೆ ಅವರ ಜಾತ್ರೆ ನಡೀತಾನೆ ಇದೆ. ನೋಡೋಣ ಏನೇನು ಆಗುತ್ತೆ ಅಂತ ಈಶ್ವರಪ್ಪ ವ್ಯಂಗ್ಯವಾಡಿದರು.
ಬಿಜೆಪಿ ಶಾಸಕರು ಸಿಂಹದ ಮರಿಗಳು: ನಮ್ಮ ಬಿಜೆಪಿ ಶಾಸಕರು ಸಿಂಹದ ಮರಿ ಇದ್ದ ಹಾಗೆ. ಯಾರೊಬ್ಬರೂ ಅಲ್ಲಿಗೆ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ನವರು ಗಿಳಿ ಭವಿಷ್ಯ ಹೇಳ್ತಿದ್ದಾರೆ. ಯಾರು, ಎಷ್ಟು ಜನ ಅಂತ ಹೇಳಲ್ಲ. ಈ ಗಿಳಿ ಭವಿಷ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಪಿಎಂ ಭೇಟಿಯಾಗಲು ಸಿಎಂಗೆ ಯಾರ ಅಪ್ಪಣೆ ಬೇಕು? ಸಿಎಂ ಬೊಮ್ಮಾಯಿ ದೆಹಲಿ ಬುಲಾವ್ ವಿಚಾರವಾಗಿ ಮಾತನಾಡಿ, ಪ್ರಧಾನಿ ಭೇಟಿಯಾಗಲು ಸಿಎಂಗೆ ಯಾರಾದಾದ್ರೂ ಅಪ್ಪಣೆ ಬೇಕೇನು? ರಾಜ್ಯ ರಾಜಕಾರಣ, ಮಂತ್ರಿ ಮಂಡಲ ವಿಸ್ತರಣೆ ಇರಬಹುದು. ಇದೆಲ್ಲ ಇದ್ದಾಗ ಸಿಎಂ ಕೇಂದ್ರ ನಾಯಕರನ್ನು ಭೇಟಿ ಮಾಡೋ ವ್ಯವಸ್ಥೆ ಬಿಜೆಪಿಯಲ್ಲಿದೆ. ಹಾಗಾಗಿ ಮಂತ್ರಿ ಮಂಡಲ, ಸಂಘಟನೆ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲು ದೆಹಲಿಗೆ ಹೋಗ್ತಿದ್ದಾರೆ ಎಂದರು.
ಇಬ್ರಾಹಿಂ ಧೂಳು ಸಹ ನಮ್ಮ ಹತ್ತಿರ ಬರಬಾರದು: ಸಿ.ಎಂ ಇಬ್ರಾಹಿಂ ಅವರನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸಿ.ಎಂ ಇಬ್ರಾಹಿಂ ಧೂಳು ಸಹ ನಮ್ಮ ಹತ್ತಿರ ಬರಬಾರದು. ಅವರನ್ನು ನಮ್ಮ ಹತ್ತಿರಾನೂ ಸೇರಿಸಲ್ಲ ಎಂದು ಕಿಡಿಕಾರಿದರು. ರಾಷ್ಟ್ರವಾದಿ ಮುಸಲ್ಮಾನರನ್ನು ಖಂಡಿತ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ. ಆದರೆ ಸಿಎಂ ಇಬ್ರಾಹಿಂ ಅವರನ್ನು ಮಾತ್ರ ಯಾವುದೇ ಕಾರಣಕ್ಕೂ ನಾವು ಸೇರಿಸಿಕೊಳ್ಳಲ್ಲ ಎಂದರು.
ಜಮೀರ್ ಸಹ ಕಾಣಿಸ್ತಿಲ್ಲ: ಮುಸ್ಲಿಂ ಮುಖಂಡರು ಕಾಂಗ್ರೆಸ್ ಬಿಡೋ ವಿಚಾರವಾಗಿ ಮಾತನಾಡಿ, ಮುಸಲ್ಮಾನರು ಕಾಂಗ್ರೆಸ್ ಬಿಟ್ಟು ಹೋದರೆ ಕಾಂಗ್ರೆಸ್ನವರು ಉಸಿರುಗಟ್ಟಿ ಸಾಯುತ್ತಾರೆ. ಕಾಂಗ್ರೆಸ್ನವರು, ಮುಸಲ್ಮಾನರು ನಮ್ಮನ್ನು ಬಿಟ್ಟು ಹೋಗಲ್ಲ ಅಂತಿದ್ದರು. ಈಗ ಸಿಎಂ ಇಬ್ರಾಹಿಂ ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಹೋಗಲ್ಲ ಅಂತ ಹೇಳಿದ್ದಾರೆ. ಇಬ್ರಾಹಿಂ ಫೆ.14ಕ್ಕೆ ಕಾಂಗ್ರೆಸ್ ಬಿಡ್ತಿದ್ದಾರೆ. ಹಾಗಾದ್ರೆ ಮುಸ್ಲಿಂ ಲೀಡರ್ ಕಾಂಗ್ರೆಸ್ ಬಿಡೋದ್ಯಾಕೆ ಎಂದು ಪ್ರಶ್ನೆ ಮಾಡಿ, ಜಮೀರ್ ಸಹ ಕಾಣಿಸ್ತಿಲ್ಲ, ಎಲ್ಲಿದ್ದಾರೆ ಅಂತ ಹುಡುಕಬೇಕು ಎಂದು ಟೀಕಿಸಿದರು.
ಮುಸ್ಲಿಮರು ಒಬ್ಬೊಬ್ಬರಾಗಿಯೇ ಕಾಂಗ್ರೆಸ್ ಬಿಡ್ತಾರೆ: ಜಮೀರ್ ಕಾಂಗ್ರೆಸ್ ಜೊತೆ ಇಲ್ಲ, ಡಿಕೆಶಿ ಜೊತೆ ಇಲ್ಲ, ಸಿದ್ದರಾಮಯ್ಯ ಜೊತೆಯೂ ಇಲ್ಲ. ಬಿಜೆಪಿ ಜೊತೆ ದಲಿತರು, ಹಿಂದುಳಿದವರು ಇದ್ದಾರೆ. ಮುಸಲ್ಮಾನರು ಮಾತ್ರ ಸ್ವಲ್ಪ ಹಿಂದೆ ಮುಂದೆ ನೋಡ್ತಿದ್ದಾರೆ. ಸ್ವತಂತ್ರ ಬಂದು 75 ವರ್ಷದ ಬಳಿಕ ಈಗ ಮುಸಲ್ಮಾನರಿಗೆ ಗೊತ್ತಾಗುತ್ತಿದೆ. ಕಾಂಗ್ರೆಸ್ ನಮ್ಮನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಂಡ್ರು ಅಂತ ಮುಸ್ಲಿಮರಿಗೆ ಈಗ ಗೊತ್ತಾಗಿದೆ. ಈಗ ಇಬ್ರಾಹಿಂ, ಮುಂದೆ ಮುಸ್ಲಿಮರು ಒಬ್ಬೊಬ್ಬರಾಗಿಯೇ ಕಾಂಗ್ರೆಸ್ ಬಿಟ್ಟು ಬರ್ತಾರೆ ಎಂದು ಭವಿಷ್ಯ ನುಡಿದರು.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸೋ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಲೆಗೆ ಮಕ್ಕಳು ಶಿಕ್ಷಣ ಕಲಿಯಲು ಹೋಗೋದು. ಸ್ಕೂಲ್ ಮಕ್ಕಳ ಮನಸ್ಸಿನಲ್ಲಿ ಧರ್ಮದ ವಿಚಾರ ಬಂದ್ರೆ ದೊಡ್ಡ ಸಮಸ್ಯೆ ಆಗುತ್ತೆ. ಕೋರ್ಟ್, ಸಂವಿಧಾನ ಸ್ಪಷ್ಟವಾಗಿ ಹೇಳುತ್ತೆ ನಾವೆಲ್ಲರೂ ಮನುಷ್ಯರು. ಶಾಲೆಯಲ್ಲಿದ್ದ ಮಕ್ಕಳೆಲ್ಲರೂ ಒಂದೇ ಆಗಿರಬೇಕು.
ಒಂದೇ ಸಮವಸ್ತ್ರ ಧರಿಸಿದ್ರೆ ಯಾವುದೇ ಸಮಸ್ಯೆ ಬರಲ್ಲ. ಶಾಲಾ ಆಡಳಿತ ಮಂಡಳಿ ಯಾವ ಸಮವಸ್ತ್ರ ಮಾಡಿರುತ್ತಾರೋ ಅದನ್ನು ಪಾಲಿಸಬೇಕು. ಇದನ್ನು ರಾಜಕಾರಣಕ್ಕೆ ಬಳಸುವ ಪ್ರಯತ್ನ ನಡೆಸುತ್ತಿದ್ದಾರೆ. ಹಿಜಾಬ್ ಧರಿಸೋದನ್ನು ನಾನು ಉಗ್ರವಾಗಿ ಖಂಡಿಸುತ್ತೆನೆ ಎಂದರು. ಹಿಂದೂ-ಮುಸ್ಲಿಂ ಮಕ್ಕಳು ಸಮವಸ್ತ್ರ ಧರಿಸಿ ಅಣ್ಣ-ತಮ್ಮ, ಅಕ್ಕ-ತಂಗಿಯರಂತೆ ಇರಬೇಕು ಎಂದರು.
ಇದನ್ನೂ ಓದಿ: ಕಾವೇರಿ - ಪೆನ್ನಾರ್ ನದಿ ಜೋಡಣೆ ಕೇಂದ್ರದ ಏಕಮುಖ ನಿರ್ಧಾರ: ಸಿದ್ದರಾಮಯ್ಯ
ಕೆಲ ಸಚಿವರು ಬಿಜೆಪಿ ಬಿಡ್ತಾರೆ ಎಂದಿದ್ದ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯತ್ನಾಳ್ ಹೇಳಿದ ತಕ್ಷಣ ಹೋಗಿ ಬಿಡ್ತಾರಾ. ಯಾರು ಏನೇ ಹೇಳಿದ್ರೂ ಬಿಜೆಪಿಯ ಒಬ್ಬ ಶಾಸಕರು ಕೂಡ ಬಿಟ್ಟು ಹೋಗಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಇನ್ನೂ ಯತ್ನಾಳ್ ಒಬ್ಬ ಹಿಂದುತ್ವವಾದಿ, ಆತನ ಬಗ್ಗೆ ನನಗೆ ಗೊತ್ತು. ಏನೋ ಕೆಲವರಿಗೆ ಈ ರೀತಿಯ ಚಟ ಇದೆ. ಮಾಧ್ಯವದವರ ಮುಂದೆ ನಿಂತು ಏನಾದರೂ ಹೇಳಬೇಕು ಅಂತ ಅನಿಸುತ್ತದೆ. ನೀವು ಕೇಳ್ತಿರಿ, ಅವರು ಹೇಳ್ತಿರ್ತಾರೆ. ಇದಕ್ಕೆ ಕಡಿವಾಣ ಹಾಕೋ ಕೆಲಸ ಹೈ ಕಮಾಂಡ್ ಮಾಡುತ್ತದೆ ಎಂದರು.