ಬಾಗಲಕೋಟೆ : ಪ್ರಬುದ್ಧ ರಾಜಕಾರಣಿಯಾಗಿರುವ ತಿಮ್ಮಾಪೂರವರು ಚಿಲ್ಲರೆ ರಾಜಕಾರಣ ಮಾಡಬಾರದು. ಯಾವ ಕಾರಣಕ್ಕಾಗಿ ನಾನು ರಾಜೀನಾಮೆ ನೀಡಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಆರ್.ಬಿ.ತಿಮ್ಮಾಪೂರ ಅವರು ಮೂರು ಬಾರಿ ಚುನಾಯಿತ ಪ್ರತಿನಿಧಗಳು. ಅವರಿಗೂ ಜವಾಬ್ದಾರಿ ಇರುತ್ತದೆ. ನಾನು ಕಾರ್ಖಾನೆ ಕಟ್ಟಿದ್ದಕ್ಕೆ ರಾಜೀನಾಮೆ ನೀಡಬೇಕಾ ಎಂದು ಪ್ರಶ್ನಿಸಿದರು.
ಕೀಳು ರಾಜಕಾರಣ ನಾನು ಮಾಡಲ್ಲ. ಇನ್ನೊಬ್ಬರಿಗೆ ಮಸಿ ಹಚ್ಚಬೇಕಾದರೆ ಮೊದಲು ಕೈಗೆ ಮಸಿ ಹಚ್ಚಿಕೊಳ್ಳಬೇಕಾಗುತ್ತದೆ. ರಾಜಕೀಯ ಲಾಭಕ್ಕಾಗಿ ತಿಮ್ಮಾಪೂರ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ನನ್ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾರ್ಖಾನೆ ಯಾರೂ ಲೀಸ್ ಮೇಲೆ ಅಥವಾ ಟೆಂಡರ್ ಮೇಲೆ ತೆಗೆದುಕೊಳ್ಳತ್ತಾರೆ ಎಂಬುದು ಮುಖ್ಯವಲ್ಲ. ಕಾರ್ಖಾನೆ ಪ್ರಾರಂಭ ಆಗಬೇಕು ಎಂಬುದು ನನ್ನ ಆಸೆ. ಯಾಕೆಂದರೆ, ನಾನು ಚಾಲನೆ ನೀಡಿದ ಕಾರ್ಖಾನೆ ನನ್ನ ಕಣ್ಣ ಮುಂದೆ ಬಂದ್ ಆಗಬಾರದು. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆದಿದೆ ಎಂದರು.
ರೈತರ 62 ಕೋಟಿ ಸಾಲ, ಸಿಬ್ಬಂದಿಗೆ ವೇತನ ಸೇರಿದಂತೆ ಇತರ ವೆಚ್ಚ ಸೇರಿ 6 ಕೋಟಿ ರೂ. ವೆಚ್ಚ ಆಗಬೇಕಾಗಿದೆ. ಕಾರ್ಖಾನೆ ಅಧ್ಯಕ್ಷರು ಕಾರಜೋಳ ಬೆಂಬಲಿಗರು ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದ ಆರು ಕೋಟಿ ಜನ ನನಗೆ ಬೆಂಬಲಿಗರು ಎಂದು ಮಾರ್ಮಿಕವಾಗಿ ಹೇಳಿದರು.
ಜಿಲ್ಲೆಯ ಜನತೆಯ ಋಣ ತೀರಿಸಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದೇನೆ. ಭೂಸ್ವಾಧಿನ ಸೇರಿದಂತೆ ನೀರಾವರಿ ಯೋಜನೆ ಬಳಕೆ ಬಗ್ಗೆ ಹೆಚ್ಚು ಒತ್ತು ಕೂಡಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರದ ಸಚಿವರಿಗೆ, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ನೀರಾವರಿ ಯೋಜನೆಯ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಕೋವಿಡ್ ನಿಯಮ ಪ್ರಕಾರ ಗಣೇಶ ಹಬ್ಬವನ್ನು ಆಚರಣೆ ಮಾಡಲು ಮುಖ್ಯಮಂತ್ರಿಗಳು ಅನುವು ಮಾಡಿ ಕೊಟ್ಟಿದ್ದಾರೆ ಎಂದರು.
ಓದಿ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅನುಮತಿ: ಆದ್ರೆ, ಕಂಡಿಷನ್ಸ್ ಅಪ್ಲೈ