ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಮಲ್ಟಿ ಬ್ರ್ಯಾಂಡ್ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗೆ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಬುಧವಾರ ಚಾಲನೆ ನೀಡಿದರು.
ಕೃಷಿ ಉತ್ಪನ್ನಗಳ ಮಳಿಗೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರಿಗೆ ದಿನ ನಿತ್ಯ ಬಳಕೆಗೆ ಬೇಕಾಗುವ ವಸ್ತುಗಳು ಒಂದೇ ಕಡೆ ಸಿಗಲು ಮಾಡಿರುವಂತ ಸೂಪರ್ ಮಾರ್ಕೆಟ್ ತರಹ ಕೃಷಿ ಮಾರ್ಕೆಟ್ ರೈತರಿಗೆ ಉಪಯೋಗವಾಗಲಿದೆ. ಈ ತರಹದ ಮಳಿಗೆಯನ್ನು ರಾಜ್ಯದಲ್ಲಿ 150 ಕ್ಕೂ ಹೆಚ್ಚು ಕಡೆ ತೆರೆಯಲಿದ್ದಾರೆ. ಅವರ ಈ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಅಲ್ಲದೇ ರೈತರಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇದೊಂದು ಉತ್ತಮ ಕಾರ್ಯವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಉದ್ಯಮಿ ಸಂಗಮೇಶ ನಿರಾಣಿ, ಕೃಷಿ ಆರ್‍ಗಾನಿಕ್ ಪಾರ್ಮ್ನ ಹೆಚ್ಚುವರಿ ನಿರ್ದೇಶಕ ವೆಂಕಟರಮಣ ರೆಡ್ಡಿ, ಮಹಾಲಕ್ಷ್ಮೀ ಟ್ರೇಡಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಬಾಗೇವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಗ್ರ ಕೃಷಿ ತಾಲೂಕುಗಳಿಗೆ ಸಚಿವರ ಭೇಟಿ, ವೀಕ್ಷಣೆ: ಕಾರ್ಯಕ್ರಮದ ಪೂರ್ವದಲ್ಲಿ ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನ ವಿವಿಧ ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಕೆ ತಾಲೂಕುಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ವೀಕ್ಷಿಸಿದರು. ಜಗದಾಳದಲ್ಲಿ ಸದಾಶಿವ ಮಲ್ಲಪ್ಪ ಬಂಗಿ ಅವರ ಜಮೀನಿನಲ್ಲಿ ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಪದ್ದತಿಯಿಂದ ಅಳವಡಿಸಿರುವ ವಿವಿಧ ಘಟಕಗಳನ್ನು ವೀಕ್ಷಣೆ ಮಾಡಿದರು. ಹೊಸೂರಿನ ಮಹಾದೇವ ಚೋಳ ಅವರ ಜಮೀನಿನಲ್ಲಿ ಅವಳಡಿಸಿದ ವಿವಿಧ ಘಟಕಗಳಾದ 30 ಎಕರೆಯಲ್ಲಿ ಕಬ್ಬು ಬೆಳೆ, ಅರಿಶಿಣ, ಬಾಳೆ, ಬಯೋಡೈಜೆಸ್ಟರ್, ಉಪ ಕಸಬುಗಳಾದ ಹೈನುಗಾರಿಕೆ ವಿಶಿಷ್ಟವಾಗಿದ್ದು, ಆಧುನಿಕ ಪದ್ದತಿಗಳನ್ನು ಅಳವಡಿಸಿರುವದನ್ನು ವೀಕ್ಷಿಸಿದರು.
ರಬಕವಿಯಲ್ಲಿ ಅಲ್ಲಮಬ್ರಭು ಎಂ. ನಾಶಿ ಅವರು ನಾಶಿ ಫುಡ್ ಪ್ರೋಡೆಕ್ಟ್ ಹೆಸರಿನಲ್ಲಿ 4 ತರಹದ ಪೊಟೆಟೋ ಚಿಪ್ಸ್, ಕುರುಕುರೆ, ಪಾಪಡಿ, ಘಾತಿ, ಸೇವ್, ಖಾರಾಬುಂದಿ, ಮಸಾಲಾ ಶೇಂಗಾ ಉತ್ಪನ್ನಗಳನ್ನು ವೀಕ್ಷಿಸಿದರು. ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಾಹಿತಿ ಪಡೆದರು. ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ ಮಾರುಕಟ್ಟೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ವಿವಿಧ ಜಿಲ್ಲೆಗಳಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಫಲಾನುಭವಿ ಅಲ್ಲಮಪ್ರಭು ನಾಶಿ ಹೇಳಿದರು.
ವಿವಿಧ ತಾಕುಗಳ ಭೇಟಿ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಜಮಖಂಡಿ ಕೃಷಿ ಇಲಾಖೆಯ ಉಪನಿರ್ದೇಶಕ ಕೆ.ಎಸ್.ಅಗಸನಾಳ, ಕೃಷಿ ಸಹಾಯಕ ನಿದೇಶಕರಾದ ಎಸ್.ಬಿ.ಅಳ್ಳೊಳ್ಳಿ, ಪಾಂಡಪ್ಪ ರಾಠೋಡ, ಕೃಷಿ ಅಧಿಕಾರಿಗಳಾದ ಬಸವರಾಜ ಮಾಳೆ, ಎಸ್.ಎಂ.ಬಿರಾದಾರ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ನ್ಯಾಯಾಂಗ ಹೋರಾಟದ ಮೂಲಕ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ: ನಿವೃತ್ತ ನ್ಯಾ. ಅರಳಿ ನಾಗರಾಜ್