ಬಾಗಲಕೋಟೆ: ಜೆಡಿಎಸ್ ಪಕ್ಷದ ರಾಜ್ಯ ಮಟ್ಟದ ನಾಯಕರು ಹಾಗೂ ಜಿಲ್ಲಾಧ್ಯಕ್ಷರ ಅಸಹಕಾರ ವರ್ತನೆಯಿಂದ ಬೇಸತ್ತು, ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದೇವೆ ಎಂದು ರಾಜ್ಯ ಕಾರ್ಯದರ್ಶಿ ಹಾಗೂ ಜೆಡಿಎಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರವಿ ಹುಣಶ್ಯಾಳ ತಿಳಿಸಿದರು.
2013ರಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ, ಸಂಘಟನೆ ಅಧ್ಯಕ್ಷರಾಗಿ, ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಐದು ವರ್ಷಗಳ ಕಾಲ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ. ಐದು ವರ್ಷದ ಅವಧಿಯಲ್ಲಿ ಎಲ್ಲಾ ಚುನಾವಣೆ ಎದುರಿಸಿದ್ದೇನೆ. ಆದರೆ ಪಾರ್ಟಿ ಫಂಡ್ ಎಂದು ಹತ್ತು ರೂಪಾಯಿ ನೀಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮಾತ್ರ ಮಾಜಿ ಪ್ರಧಾನಿ ದೇವೇಗೌಡರು ಹತ್ತು ಲಕ್ಷ ರೂಪಾಯಿಗಳ ಚೆಕ್ ನೀಡಿದ್ದು ಬಿಟ್ಟರೆ, ಬಾಗಲಕೋಟೆ ಜಿಲ್ಲೆಯ ಸಂಘಟನೆಗೆ ಹೆಚ್ಚು ಒತ್ತು ನೀಡಿಲ್ಲ ಎಂದು ಅವರು ದೂರಿದರು.
ಪರಿಸ್ಥಿತಿ ಹೀಗಿದ್ದರೂ ಸಹ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಆದರೆ ಇತ್ತೀಚೆಗೆ ಜಿಲ್ಲಾಧ್ಯಕ್ಷರ ನೇಮಕ ಸೇರಿದಂತೆ ಇತರ ಪದಾಧಿಕಾರಿಗಳ ನೇಮಕ ಮಾಡುವಾಗ ರಾಜ್ಯ ಮಟ್ಟದ ನಾಯಕರು ಯಾವುದೇ ಅಭಿಪ್ರಾಯ ಕೇಳುತ್ತಿಲ್ಲ. ಈಗ ಜಿಲ್ಲಾಧ್ಯಕ್ಷರಾದ ಹನುಮಂತ ಮಾವಿನಮರದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸದೆ ಹಾಗೂ ಯಾರನ್ನುೂ ಜೊತೆಯಲ್ಲಿ ಕರೆದುಕೊಂಡು ಹೋಗದೆ ಏಕಚಕ್ರಾಧಿಪತ್ಯ ನಡೆಸುತ್ತಿದ್ದಾರೆ. ಇದರಿಂದ ಬೇಸತ್ತು ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದೇವೆ ಎಂದು ಹುಣಶ್ಯಾಳ ತಿಳಿಸಿದರು.