ಬಾಗಲಕೋಟೆ : ರೈಲ್ವೆ ಟಿಕೇಟ್ ಕಲೆಕ್ಟರ್ ಹೃದಯಾಘಾತದಿಂದ ಮೃತಪಟ್ಟಿದ್ದು, ಬಳಿಕ ಬಂದ ಕೋವಿಡ್ ವರದಿಯಲ್ಲಿ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕು ದೃಢ ಖಚಿತತೆಗಾಗಿ ಬೆಂಗಳೂರಿಗೆ ಪರೀಕ್ಷೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಳುಹಿಸಿಕೊಟ್ಟಿದ್ದಾರೆ. ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿ(57 ವರ್ಷ) ಹುಬ್ಬಳ್ಳಿಯ ಮಿರಜ್ ಮಾರ್ಗದ ರೈಲ್ವೆಯಲ್ಲಿ ರೈಲ್ವೆ ಟಿಕೇಟ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಿರಜ್‌ನಿಂದ ಮೂರು ದಿನದ ಹಿಂದೆ ವಾಪಾಸ್ಸಾಗಿದ್ದು, ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೃತಪಟ್ಟ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ, ಮೃತ ವ್ಯಕ್ತಿ ಮಹಾರಾಷ್ಟ್ರದಿಂದ ವಾಪಾಸ್ಸಾದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತಪಟ್ಟ ಬಳಿಕ ಗಂಟಲು ಮಾದರಿ ಪರೀಕ್ಷಿಸಲಾಗಿತ್ತು.
ಇನ್ನೂ ಬೆಂಗಳೂರಿನಿಂದ ವರದಿ ದೃಢವಾಗಬೇಕಾಗಿದೆ. ಕೋವಿಡ್-19 ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೇರವೇರಿಸಿದ್ದು, ಸದ್ಯ ಚಿಕ್ಕಮ್ಯಾಗೇರಿ ಗ್ರಾಮ ಸೀಲ್‌ಡೌನ್ ಆಗಿದೆ. ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುವ ಮುನ್ನವೇ ಅನೇಕರು ಮೃತನ ಅಂತಿಮ ದರ್ಶನ ಪಡೆದಿದ್ದರು. ಕೋವಿಡ್ ಪರೀಕ್ಷೆಯ ಬಳಿಕ ಜನತೆ ಆತಂಕಗೊಂಡಿದ್ದಾರೆ. ಎಷ್ಟು ಜನರು ಅಂತ್ಯಕ್ರಿಯೆಯ ಸಂದರ್ಭದಲ್ಲಿ ಭಾಗವಹಿಸಿದ್ದರು ಎಂಬುದನ್ನು ಮಾಹಿತಿ ಕಲೆ ಹಾಕುತ್ತಿದ್ದು, ಜಿಲ್ಲಾಡಳಿತಕ್ಕೆ ಪ್ರಕರಣ ತಲೆಬಿಸಿಯಾಗಿ ಪರಿಣಮಿಸಿದೆ.