ಬಾಗಲಕೋಟೆ: ''ಶಾಸಕ ವೀರಣ್ಣ ಚರಂತಿಮಠ ಅವರು ಬಿಜೆಪಿ ಹಾಗೂ ಬಿವಿವಿ ಸಂಘಕ್ಕೆ ಮೋಸ ಮಾಡುತ್ತಾ ಬಂದಿದ್ದಾರೆ'' ಎಂದು ಮಲ್ಲಿಕಾರ್ಜುನ ಚರಂತಿಮಠ ವಾಗ್ದಾಳಿ ನಡೆಸಿದರು. ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬಿಜೆಪಿ ಹಾಗೂ ಸಂಘ ನನ್ನಿಂದ ಬೆಳೆದಿದೆ ಎಂದು ಜಂಬ ಕೊಚ್ಚಿಕೊಳ್ಳುತ್ತಾ ಸಾಗುತ್ತಿದ್ದಾರೆ. ಪಕ್ಷ ಹಾಗೂ ಸಂಘವನ್ನು ಕಟ್ಟಬೇಕಾದರೆ ಸಾಕಷ್ಟು ಜನರ ಶ್ರಮವಿದೆ" ಎಂದರು.
"ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿವಿವಿ ಸಂಘ ಬೀಳೂರು ಅಜ್ಜನ ಆಶೀರ್ವಾದದಿಂದ ಇವತ್ತು ಹೆಮ್ಮರವಾಗಿ ಬೆಳೆದಿದೆ. ಸಂಘ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯಲು ನಮ್ಮ ಊರಿನ ಹಿರಿಯರಾದ ತಪಶೆಟ್ಟಿ, ಶಾಬಾದಿ, ಸಕ್ರಿ, ಸಾಸನೂರ, ಸರನಾಡಗೌಡರ, ನಾಡಗೌಡರ ಹಾಗೂ ನಮ್ಮ ತಂದೆಯವರ ಶ್ರಮ ಹಾಗೂ ಹಿರಿಯರ ಪ್ರಾಮಾಣಿಕತೆ ಕಾರಣ. ಇದು ಒಬ್ಬರಿಂದ ಸಾಧ್ಯವಿಲ್ಲ. ಕಾರ್ಯಾಧ್ಯಕ್ಷರಾದವರು ಇದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಡೆಂಟಲ್, ಇಂಜಿನಿಯರಿಂಗ್, ಶಾಲಾ ಕಾಲೇಜುಗಳಿದ್ದವು. ಇವೆಲ್ಲವನ್ನೂ ನಾನೇ ಬೆಳೆಸಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಮೆಡಿಕಲ್ ಕಾಲೇಜು ಆಗಬೇಕಾದರೆ ಸಿದ್ದಣ್ಣ ಶೆಟ್ಟರ ಕೊಡುಗೆ ಇದೆ'' ಎಂದು ಹೇಳಿದರು.
''ಬಿವಿವಿ ಸಂಘವನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬಡವರಿಗಾಗಿ ನಿರ್ಮಾಣವಾಗಿರುವ ಶಿಕ್ಷಣ ಸಂಸ್ಥೆಯನ್ನು ಉಳ್ಳಾಗಡ್ಡಿ ಸವಾಲಿನಂತೆ ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ತಾಳ್ಮೆಯಿಂದ ಸಂಸ್ಥೆ ಬೆಳೆಸಿದವರು ಹಾಗೂ ಜನರು ನೋಡುತ್ತಿದ್ದಾರೆ. ಸಂಘವು ನಿಮ್ಮೊಬ್ಬರದೇ ಅಲ್ಲ ನಮ್ಮದು ಕೂಡಾ ಹೌದು'' ಎಂದರು.
''ಸಂಘದಲ್ಲಿ ತಮ್ಮ ವಿರುದ್ಧ ಯಾರಾದರೂ ನಿಂತರೆ ಅವರನ್ನು ಸದಸ್ಯತ್ವದಿಂದ ತೆಗೆದುಹಾಕುವುದು. ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುವ ರೂಢಿ ಬೆಳೆಸಿಕೊಂಡಿದ್ದಾರೆ. ಈ ರೀತಿಯ ವರ್ತನೆ ಹೆಚ್ಚು ದಿನ ನಡೆಯುವುದಿಲ್ಲ'' ಎಂದು ಎಚ್ಚರಿಸಿದರು.
''ಬಿವಿವಿ ಸಂಘವನ್ನು ಹೇಗೆ ವೈಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೋ ಅದೇ ಮಾರ್ಗದಲ್ಲಿ ಬಿಜೆಪಿಯನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರವೃತ್ತಿಯನ್ನು ಇಲ್ಲಿಯ ಸ್ಥಳೀಯ ಶಾಸಕರು ಮೈಗೂಡಿಸಿಕೊಂಡಿದ್ದಾರೆ. ಪಕ್ಷದಲ್ಲಿ ತಮ್ಮ ವಿರುದ್ಧ ಮಾತನಾಡಿದರೆ ಅಂತವರನ್ನು ಪ್ರಭಾವ ಬಳಸಿ ಪಕ್ಷದಿಂದ ತೆಗೆದುಹಾಕುವ ಹಾಗೂ ಪಕ್ಷದ, ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಕೇಸ್‌ಗಳನ್ನು ಹಾಕಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರಿಗೆ ಸಮಗ್ರ ಮಾಹಿತಿ ನೀಡಲಾಗಿದೆ'' ಎಂದರು.
ಕಾಮಧೇನು ಸಂಸ್ಥೆ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ''ಕೋವಿಡ್ ಸಂದರ್ಭದಲ್ಲಿ ಜನರ ಹಾಗೂ ರೈತರ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇವೆ. ಯಾವುದೇ ಲಾಭವನ್ನು ನಿರೀಕ್ಷೆ ಮಾಡಿರಲಿಲ್ಲ. ಲಾಭ ಮಾಡಿಕೊಳ್ಳಲು ನನಗೆ ಸಾಕಷ್ಟು ಉದ್ಯಮ ಇವೆ. ಕಾಮಧೇನು ಸಂಸ್ಥೆ ಮಾಡಿದ ಸೇವಾ ಕಾರ್ಯದ ಬಗ್ಗೆ ಸ್ಥಳೀಯ ಶಾಸಕರು ಜನರಿಗೆ ತಪ್ಪು ಸಂದೇಶ ನೀಡುವುದನ್ನು ಬಿಡಬೇಕು. ನಮ್ಮ ಸಂಸ್ಥೆ ಉತ್ತಮ ಸೇವಾ ಕಾರ್ಯ ಮಾಡಿರುವ ಕಾರಣದಿಂದ ಮಂತ್ರಾಲಯದ ಶ್ರೀಗಳು ಆಶೀರ್ವಾದ ಪತ್ರ ನೀಡಿ ಪ್ರೋತ್ಸಾಹಿಸಿದ್ದಾರೆ" ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಮಧೇನು ಸಂಸ್ಥೆಯ ಪ್ರಮುಖರಾದ ಸಂತೋಷ ಹೊಕ್ರಾಣಿ, ವಿಜಯ ಸುಲಾಖೆ, ಬಸವರಾಜ ಕಟಗೇರಿ, ಶಿವು ಮೇಲ್ನಾಡ, ರಾಜು ಗೌಳಿ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: 'ಯಾರೋ ಕುಳಿತುಕೊಂಡು ಇಂಥವರೇ ಸಿಎಂ ಆಗ್ಬೇಕು, ಆಗ್ಬಾರ್ದು ಅಂದ್ರೆ ಅದು ಡಿಕ್ಟೇಟರ್‌ಶಿಪ್ ಆಗುತ್ತೆ'