ಬಾಗಲಕೋಟೆ: ಸರ್ವಧರ್ಮ ಸಮನ್ವಯ ತ್ರೀವಿಧ ದಾಸೋಹ ಮಠ ಈ ಭಾಗದ ಕೃಷಿಕರ ವಿಶ್ವವಿದ್ಯಾಲಯ ಮಳಿಮಠ ಎಂದು ಜನಜನಿತವಾಗಿರುವ, ಜಲವನ್ನು ಪೂಜಿಸುವ ಶ್ರೀ ಮಳೆರಾಜೇಂದ್ರ ಸ್ವಾಮಿ ಮಠದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ ಶ್ರೀ ಮಳೆರಾಜೇಂದ್ರ ಸ್ವಾಮಿಯ ಮೂರ್ತಿಗೆ ಮಹಾಭಿಷೇಕ, ಮಹಾಮಂಗಳಾರತಿ, ಭಗವದ್ಗೀತ ಪಾರಾಯಣ ನಡೆಯಿತು. ವಿಶೇಷ ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹರಕೆ ಹೊತ್ತ ಅನೇಕ ಭಕ್ತಾದಿಗಳು ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಹರಕೆ ಸಮರ್ಪಪಿಸಿದರು.
ಮಧ್ಯಾಹ್ನ ಸಾವಿರಾರು ಮಹಿಳೆಯರ ಆರತಿ ಸೇವೆಯೊಂದಿಗೆ ಶ್ರೀ ಸ್ವಾಮಿಯ ಮೂರ್ತಿ ಹೊತ್ತ ಪಲ್ಲಕ್ಕಿ, ಕುದುರೆಯನ್ನೇರಿದ ಶ್ರೀ ಜಗನ್ನಾಥಸ್ವಾಮಿಗಳ ಸಾನ್ನಿಧ್ಯದಲ್ಲಿ, ನಂದಿಕೋಲು ಪುರವಂತರ ಸೇವೆಯೊಂದಿಗೆ ಭಾಜಾ ಭಜಂತ್ರಿ, ಕರಡಿ ಮಜಲು ಸೇರಿದಂತೆ ಉತ್ಸವ ಉದ್ಧೂರಿಯಾಗಿ ಜರುಗಿತು. ಆರತಿ ಸೇವೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಮಹಿಳೆಯರು ದೀಪದ ಆರತಿಗಳಿಗೆ ಎಣ್ಣೆ ನೀಡಿ ತಮ್ಮ ಸೇವೆ ಸಲ್ಲಿಸಿದರು. ಸಣ್ಣ ರಥೋತ್ಸವ ಮಠದ ನಂತರ ಶ್ರೀಮಠದಲ್ಲಿ ಮಳೆರಾಜೇಂದ್ರ ಸ್ವಾಮಿ ಮೂರ್ತಿಗೆ ಮಠದ ಶ್ರೀಗಳಾದ ಜಗನ್ನಾಥಸ್ವಾಮಿ, ಅಖಂಡಸ್ವಾಮಿ ಮಹಾಪುರುಷ ಅವರು ಸಕಲ ಭಕ್ತಾದಿಗಳೊಡನೆ ವಿಶೇಷ ಮಂಗಳಾರತಿ ನೆರವೇೆರಿಸಿದರು.
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮಠವಾಗಿದ್ದರಿಂದ ಸಕಲ ಧರ್ಮದ ಭಕ್ತರು, ಮುರನಾಳ ಜಿಪಂ ಸದಸ್ಯ ಹೂವಪ್ಪ ರಾಥೋಡ, ಗ್ರಾಪಂ ಅಧ್ಯಕ್ಷರು, ಸದಸ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.